

ಮಂಗಳೂರು: ಸ್ವಚ್ಛ ಮಂಗಳೂರು ನಿರ್ಮಾಣದಲ್ಲಿ ರಾಮಕೃಷ್ಣ ಮಿಷನ್ ಕೊಡುಗೆ ಮಹತ್ತರವಾಗಿದೆ. ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ಈ ಅತ್ಯುತ್ತಮ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಮೇಯರ್ ಸುಧೀರ ಶೆಟ್ಟಿ ಕಣ್ಣೂರು ಹೇಳಿದರು.
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಮೂರನೇ ತಿಂಗಳ ಶ್ರಮದಾನ ಭಾನುವಾರ ಪಂಪ್‌ವೆಲ್ ಪರಿಸರದಲ್ಲಿ ಚಾಲನೆ ನೀಡಿ ಮಾತನಾಡಿದರು.
ಐ.ಸಿ.ಎ.ಐ. ಮಂಗಳೂರು ವಿಭಾಗದ ಅಧ್ಯಕ್ಷ ಸಿಎ ಗೌತಮ್ ನಾಯಕ್ ಮಾತನಾಡಿ,ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಒಂದು ಅರ್ಥಪೂರ್ಣ ಕಾರ್ಯಕ್ರಮ. ಇಂತಹ ಸ್ವಚ್ಛತಾ ಶ್ರಮದಾನಕ್ಕೆ ಮಂಗಳೂರಿಗರು ಕೈಜೋಡಿಸಬೇಕು ಎಂದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ, ನಮ್ಮ ನಗರವನ್ನು ಸ್ವಚ್ಛ ಸುಂದರವಾಗಿರಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಸ್ವಚ್ಛತೆ ಎಂದರೆ ಭೂಮಾತೆಯ ಪೂಜೆ. ಈ ಪವಿತ್ರ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಬೇಕು ಎಂದರು.
ಪಾಲಿಕೆಯ ಸದಸ್ಯ ಸಂದೀಪ್ ಗರೋಡಿ, ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ್ ರಾವ್, ಉದ್ಯಮಿ ನಂದನ್ ಮಲ್ಯ, ಡಾ.ಸತೀಶ್ ರಾವ್ ಉಪಸ್ಥಿತರಿದ್ದರು.
ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಯೇಶ್ ನಾಯರ್, ರಂಗನಾಥ್ ಹಾಗೂ ಹಿರಿಯ ಸ್ವಯಂಸೇವಕರಾದ ಕಮಲಾಕ್ಷ ಪೈ, ಉದಯ್ ಕೆ ಪಿ, ಸೀತಾರಾಮ ಗಟ್ಟಿ, ಸುಬ್ಬಯ್ಯ, ಶಿವರಾಂ, ಸುನಂದಾ ಶಿವರಾಂ, ಪ್ರಕಾಶ್ ನೇತೃತ್ವದಲ್ಲಿ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಮೇಲ್ಸೇತುವೆಯ ಕೆಳಭಾಗ ಹಾಗೂ ಡಿವೈಡರ್ ಗಳನ್ನು ಶುಚಿಗೊಳಿಸಿದರು. ಎ.ಎಂ. ವಾಟರ್ ಸಪ್ಲೈ ಮಾಲೀಕರಾದ ಅನುಜ್ ಚನಿಲ್ಲೋ ಅವರೊಂದಿಗೆ ಪ್ರಕಾಶ್ ಗರೋಡಿ, ತಾರಾನಾಥ್ ಆಳ್ವ ಹಾಗೂ ಬಾಲಕೃಷ್ಣ ಭಟ್ ಟ್ಯಾಂಕರ್ ಮೂಲಕ ನೀರು ಹಾಕಿ ಮೇಲ್ಸೇತುವೆ ಗೋಡೆಗಳನ್ನು ಸ್ವಚ್ಛಗೊಳಿಸಿದರು.
ಅನಧಿಕೃತ ಬ್ಯಾನರ್‌ಗಳ ತೆರವು:
ಯುವವಾಹಿನಿ ಕಂಕನಾಡಿ ಘಟಕದ ಸದಸ್ಯರಾದ ಲೋಕೇಶ್, ಮಮತಾ, ರಾಹುಲ್, ಪೃಥ್ವಿರಾಜ್, ಸುಮತಿ, ತಿಲಕ್ ರಾಜ್, ರೋಹಿತ್, ಧನುಷ್ ಹಾಗೂ ಸ್ವಯಂಸೇವಕರಾದ ಸೌರಜ್, ಅನಿರುಧ್ ನಾಯಕ್, ಡಾ. ಕೃಷ್ಣ ಶರಣ್, ರಾಜೇಶ್ ಬಿ.ಕೆ. ನೇತೃತ್ವದಲ್ಲಿ ಎ. ಜೆ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಸದಾನಂದ, ಮನೋಹರ್ ಹಾಗೂ ವಿದ್ಯಾರ್ಥಿಗಳು ಜೊತೆಗೂಡಿ 50 ಕ್ಕೂ ಹೆಚ್ಚು ದೊಡ್ಡ ಗಾತ್ರದ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಿದರು.
ಸರ್ವಶಕ್ತಿ ಮಹಿಳಾ ಮಂಡಳಿ ಸದಸ್ಯರಾದ ತೇಜಾಕ್ಷಿ ಮೋಹನ್, ಶಕುಂತಲಾ ಗಟ್ಟಿ, ಚಂದ್ರಿಕಾ ಹಾಗೂ ಸರ್ವಶಕ್ತಿ ಬಾಲ ಭಜನಾ ಕಲಿಕಾ ತಂಡದ ಮಕ್ಕಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಿದರು. ಹಿರಿಯ ಕಾರ್ಯಕರ್ತರಾದ ಉಮಾನಾಥ ಕೋಟೆಕಾರ್, ಸತ್ಯನಾರಾಯಣ ಕೆ. ವಿ, ದಿಲ್ ರಾಜ್ ಆಳ್ವ ಅಭಿಯಾನದಲ್ಲಿ ಭಾಗವಹಿಸಿದ್ದರು. ಎಂ.ಆರ್.ಪಿ.ಎಲ್. ಪ್ರಾಯೋಜಕತ್ವ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಸಹಕಾರದಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಯಿತು.