ಸೆ.3 ಜಿಜ್ಞಾಸಾ ಸನಾತನ ಚಿಂತನ ಗಂಗಾ ಉದ್ಘಾಟನೆರಾಮಕೃಷ್ಣ ಮಠದಲ್ಲಿ ಸರಣಿ ಉಪನ್ಯಾಸ ಮಾಲಿಕೆ

Ganesh Karnik
Published on

ಮಂಗಳೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಸ್ವಚ್ಛ ಮಂಗಳೂರು ಫೌಂಡೇಶನ್ ಜಿಜ್ಞಾಸಾ ಸನಾತನ ಚಿಂತನ ಗಂಗಾ ಶೀರ್ಷಿಕೆಯಡಿ ಧ್ವೈಮಾಸಿಕ ಉಪನ್ಯಾಸಕ ಮಾಲಿಕೆ ಪ್ರಾರಂಭಿಸಲಿದ್ದು, ಇದರ ಉದ್ಘಾಟನೆ ಸೆ.3ರಂದು ಬೆಳಗ್ಗೆ 10 ಗಂಟೆಗೆ ಮಂಗಳಾದೇವಿಯ ರಾಮಕೃಷ್ಣ ಮಠದ ವಿವೇಕಾನಂದ ಸಭಾಭವನದಲ್ಲಿ ಜರುಗಲಿದೆ.


ವಿಜ್ಞಾನಿ, ಚಿಂತಕ ಹಾಗೂ ಸಂಶೋಧಕ ಡಾ.ಆನಂದ ರಂಗನಾಥನ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಮಠದ ಸ್ವಾಮಿ ಜಿತಕಾಮಾನಂದ ಜೀ ದಿವ್ಯ ಸಾನಿಧ್ಯ ವಹಿಸುವರು ಎಂದು ಜಿಜ್ಞಾಸ ಸಂಚಾಲಕ ಕ್ಯಾ.ಗಣೇಶ್ ಕಾರ್ಣಿಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದ್ವೈಮಾಸಿಕ ಉಪನ್ಯಾಸ ಮಾಲಿಕೆ ಪ್ರತಿ ಎರಡು ತಿಂಗಳಿನ ಒಂದು ಭಾನುವಾರ ವರ್ತಮಾನ ಜಗತ್ತಿನ ವಿಷಯಗಳ ಬಗ್ಗೆ ದೇಶದ ಪ್ರಸಿದ್ಧ ಭಾಷಣಕಾರರು ಹಾಗೂ ರಾಮಕೃಷ್ಣ ಮಠದ ಸಂತರಿಂದ ಉಪನ್ಯಾಸ ನಡೆಯಲಿದೆ. ಸಾಮಾಜಿಕ, ಐತಿಹಾಸಿಕ, ಬೌದ್ಧಿಕ, ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದಂತೆ ಐರೋಪ್ಯ ದೃಷ್ಟಿಕೋನದಿಂದ ಹೊರ ಬಂದು ಭಾರತೀಯ ಪಾರಂಪರಿಕ ಜೀವನ ಮೌಲ್ಯಗಳ ನೆಲೆಗಟ್ಟಿನಲ್ಲಿ ಚರ್ಚಿಸಿ, ಹೊಸ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿದೆ.


ವಿಶೇಷವಾಗಿ ಮಂಗಳೂರಿನ ವೈದ್ಯರು, ಇಂಜೀನಿಯರ್ಸ್, ವಕೀಲರು, ಚಾರ್ಟೆರ್ಡ್ ಅಕೌಂಟೆಂಟ್ಸ್, ಬ್ಯಾಂಕ್ ಉದ್ಯೋಗಿಗಳು, ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್, ಶಿಕ್ಷಣ ತಜ್ಞರು, ಕೆನರಾ ಚೇಂಬರ್ಸ್‌, ವಾಸ್ತು ತಜ್ಞರು, ಕ್ರೆಡೈ, ಹಿರಿಯ ನಾಗರಿಕರು, ಪತ್ರಕರ್ತರು ಮೊದಲಾದ ನಾಗರಿಕ ಬಂಧುಗಳಿಗೆ ಉಪನ್ಯಾಸ ಆಯೋಜಿಸಲಾಗುತ್ತಿದೆ ಎಂದವರು ಹೇಳಿದರು.


ವಾರದ ಸ್ವಚ್ಛತೆ ಮತ್ತೆ ಆರಂಭ: ಮಂಗಳೂರು ನಗರದಲ್ಲಿ 5 ವರ್ಷಗಳ ಕಾಲ ಸ್ವಚ್ಛ ಮಂಗಳೂರು ಅಭಿಯಾನ ನಡೆಸಿ ಜನ ಜಾಗೃತಿ ಮೂಡಿಸಿದ್ದು, ಮತ್ತೆ ಆರಂಭಗೊಳ್ಳಲಿದೆ. ಸ್ವಯಂ ಸೇವಕರ 60 ತಂಡಗಳು ಅಂದು ಮಿಷನ್ ಜತೆಗಿತ್ತು. ಈಗಲೂ ಸ್ವಯಂ ಸೇವಕರು ಸಂಪರ್ಕದಲ್ಲಿದ್ದಾರೆ. ಸ್ವಚ್ಛತೆ ಜಾಗೃತಿ ಜತೆಗೆ ಸ್ವಚ್ಛತಾ ಕಾರ್ಯಕ್ರಮ ಪ್ರತೀ ಭಾನುವಾರ ಒಂದೊಂದು ಪ್ರದೇಶದಲ್ಲಿ ನಡೆಯಲಿದೆ. ಇದಕ್ಕಾಗಿ ಪೂರಕ ಸಿದ್ಧತೆ ನಡೆಯುತ್ತಿದೆ ಎಂದು ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.


ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ, ಸಹ ಸಂಚಾಲಕ ಪ್ರೊ.ಧನೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net