

ಶಿರಸಿ: ಟಿಎಸ್‌ಎಸ್‌ನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ಕಡವೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಟಿಎಸ್‌ಎಸ್‌ನ ಪ್ರಭಾರ ಪ್ರಧಾನ ವ್ಯವಸ್ಥಾಪಕರಿಗೆ ಸಲ್ಲಿಸಿ, 2023ರ ಆ.20ರಂದು ನಡೆದ ದಿ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯ ಚುನಾವಣೆಯಲ್ಲಿ ಸ್ಪರ್ಧಿಸಿ 2028ರವರೆಗೆ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ಪ್ರಸ್ತುತ ಆಡಳಿತ ಮಂಡಳಿಗೆ ರೈತಪರ ಕಾಳಜಿ ಮತ್ತು ಸಂಘದ ಅಭಿವೃದ್ಧಿ ಚಿಂತನೆ ಇಲ್ಲವಾಗಿದೆ. ವೈಯಕ್ತಿಕ ವ್ಯವಹಾರ ಮಾಹಿತಿಯನ್ನು ಬೇರೆಯವರಿಗೆ ಕೊಡಲಾಗಿದೆ. ನನ್ನೊಬ್ಬನನ್ನೇ ಗುರಿಯಾಗಿಸಿ, ಸಂಸ್ಥೆಯಿಂದ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಪ್ರತಿ ಸಭೆಯ ಠರಾವುಗಳನ್ನು ನಿರ್ದೇಶಕನಾದ ನನಗೆ ನೀಡುತ್ತಿಲ್ಲ. ಈ ಎಲ್ಲ ಅಂಶಗಳ ಕಾರಣದಿಂದ ಈಗಿನ ಆಡಳಿತ ಮಂಡಳಿಯ ದ್ವೇಷ ಸಾಧನೆಗೆ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಟಿಎಸ್‌ಎಸ್ ಸಂಸ್ಥೆಯಲ್ಲಿ ಹಾಲಿ ಆಡಳಿತ ಮಂಡಳಿ ಮತ್ತು ಹಿಂದಿನ ಆಡಳಿತ ಮಂಡಳಿಯ ನಡುವೆ ತಿಕ್ಕಾಟ ಈಗ ತೀವ್ರವಾಗಿದೆ. ಹಿಂದಿನ ಅವಧಿಯಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ರಾಮಕೃಷ್ಣ ಹೆಗಡೆ ಕಾರ್ಯ ನಿರ್ವಹಿಸಿದ್ದರು. ಟಿಎಸ್‌ಎಸ್ ಸಂಸ್ಥೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿ. ಶ್ರೀಪಾದ ಹೆಗಡೆ ಕಡವೆ ಪುತ್ರನಾಗಿದ್ದು, ಅವರ ರಾಜೀನಾಮೆಯಿಂದ ಸಂಸ್ಥೆಯಲ್ಲಿ ಕಡವೆ ಕುಟುಂಬ ಟಿಎಸ್‌ಎಸ್ ಸಂಸ್ಥೆಯಿಂದ ಸಂಪೂರ್ಣ ಹೊರಬಂದಂತಾಗಿದೆ.