

ಮಂಡ್ಯ: ಲೋಕ್ ಶಕ್ತಿ ವತಿಯಿಂದ ಜ.12ರಂದು ನಗರದ ಗಾಂಧಿಭವನದಲ್ಲಿ ಮೌಲ್ಯಧಾರಿತ ಮತ್ತು ಅಧಿಕಾರ ವಿಕೇಂದ್ರೀಕರಣ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗ್ಡೆ ಅವರ 20ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ, ನೇತ್ರದಾನ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಲೋಕ್ ಶಕ್ತಿಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ವಿ.ಸ್ಥಾವರಮಠ್ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಸಮಾರಂಭವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಉದ್ಘಾಟಿಸುವರು. ರಾಜ್ಯ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಪ್ರಧಾನ ಭಾಷಣ ಮಾಡುವರು. ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ರಕ್ತದಾನ ಶಿಬಿರ ಹಾಗೂ ಪತ್ರಕರ್ತ ಕಬ್ಬನಹಳ್ಳಿ ಶಂಭು ನೇತ್ರದಾನ ಶಿಬಿರಕ್ಕೆ ಚಾಲನೆ ನೀಡುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಲೋಕ್ ಶಕ್ತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ ಅಭಿನಂದಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಲಾಗುತ್ತಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಾಗುವುದು. ಮುಂದೆ ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿದ್ದೇನೆ. ರಾಮಕೃಷ್ಣ ಹೆಗ್ಡೆ ಕಾಲವಾದರೂ ಅವರ ಜನಪರ ಯೋಜನೆಗಳ ಮೂಲಕ ಜೀವಂತವಾಗಿದ್ದಾರೆ. ಲೋಕ್ ಶಕ್ತಿ ಸ್ಥಾಪನೆ ಮಾಡಿದಾಗ ಮಂಡ್ಯದಲ್ಲಿಯೇ ಚಿಹ್ನೆ ಬಿಡುಗಡೆ ಮಾಡಿದ್ದರು. ಅದರಂತೆ ಪಕ್ಷವನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಮಂಡ್ಯದಲ್ಲಿಯೇ ಅವರ 20ನೇ ವರ್ಷದ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ, ಮಾಣಿಕ್ಯನಹಳ್ಳಿ ವೆಂಕಟೇಶ್, ಎಂ.ಎನ್.ಶಂಕರ್, ಶಿವಕುಮಾರಸ್ವಾಮಿ, ಮಾರುತಿಪ್ರಸಾದ್ ಹಾಜರಿದ್ದರು.