ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರಜ್ಞೆ ಮೂಡಿಸುವುದು ಅಗತ್ಯ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

Ramakrishna College Golden Jubilee mandya
Published on

ಮಂಡ್ಯ: ಹದಿಹರೆಯದ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವುದರ ಜತೆಗೆ ರಾಷ್ಟ್ರಪ್ರಜ್ಞೆ ಮೂಡಿಸುವುದು ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ರೋಟರಿ ಶಾಲೆಯಲ್ಲಿ ರಾಮಕೃಷ್ಣ ವಿದ್ಯಾಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಮೈಸೂರು ಆಯೋಜಿಸಿದ್ದ ಸುವರ್ಣ ಮಹೋತ್ಸವ ವರ್ಷ-ಸ್ವಾಮಿ ಶಾಂಭವಾನಂದ ಸ್ಮರಣಾರ್ಥ ಅಂತರ ಪ್ರೌಢಶಾಲಾ ಸಾಮಾನ್ಯ ಜ್ಞಾನ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಸದಾ ದೇಶದ ಅಭಿವೃದ್ದಿ ಬಗ್ಗೆ ಚಿಂತಿಸುವ ಆಲೋಚನೆ ಹೆಚ್ಚಿಸುವುದು, ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವ ಸದುದ್ದೇಶದಿಂದ ರಾಮಕೃಷ್ಣ ವಿದ್ಯಾಶಾಲಾ, ಹಳೇ ವಿದ್ಯಾರ್ಥಿಗಳ ಸಂಘದಿಂದ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಸಲಾಗಿದೆ. ಇಡೀ ರಾಜ್ಯಾದ್ಯಂತ ಸುಮಾರು 96 ಕೇಂದ್ರಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ ಪ್ರೌಢಶಾಲಾ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡಿ, ಮಕ್ಕಳನ್ನು ರಾಜ್ಯಮಟ್ಟಕ್ಕೆ ಆಯ್ಕೆಮಾಡಿ ಬಹುಮಾನ-ಪುಸ್ತಕದ ಜತೆಗೆ ನಗದು ಬಹುಮಾನ ಕೊಡಲಾಗುವುದು ಎಂದು ವಿವರಿಸಿದರು.

ಜಿಲ್ಲೆಯಲ್ಲಿ 7 ತಾಲೂಕಲ್ಲೂ ಆಯ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿದೆ. ದೇಶ ಕಟ್ಟುವ ನಿಟ್ಟಿನಲ್ಲಿ ಮ್ಯಾನ್‌ಮೇಕಿಂಗ್ ತತ್ವ ಇಟ್ಟುಕೊಂಡು ಶಿಕ್ಷಣವನ್ನು ಕೊಡುತ್ತಾ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ತಾಳ್ಮೆ ರಾಷ್ಟ್ರಾಭಿಮಾನ ಮೂಡಿಸಿ ಸತ್ಪಜೆಗಳನ್ನಾಗಿ ರೂಪಿಸು ಧ್ಯೇಯವಾಗಿದೆ ಎಂದು ನುಡಿದರು.

ಹಳೇ ವಿದ್ಯಾರ್ಥಿಯಾದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ಸ್ವಾಮಿ ಶಾಂಭವಾನಂದ ಅವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನ ಪರೀಕ್ಷೆಯನ್ನು ನಡೆಸಿದ್ದೇವೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆಮಾಡಿ ಬಹುಮಾನ ನೀಡಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ರೋಟರಿ ಶಾಲೆ ಅಧ್ಯಕ್ಷ ಮಾದಪ್ಪ, ಕಾರ್ಯದರ್ಶಿ ಪ್ರಭಾಕರ್, ಡಿಡಿಪಿಐ ಶಿವರಾಮೇಗೌಡ, ಬಿಇಒ ಮಹದೇವು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಎಸ್.ಪಿ.ಸುರೇಶ್, ಹಳೇ ವಿದ್ಯಾರ್ಥಿಗಳಾದ ವೈದ್ಯ ಡಾ.ಕೃಷ್ಣಸ್ವಾಮಿ, ವಕೀಲ ಕೇಶವಮೂರ್ತಿ, ಮನೋಜ್ಞ, ಸಂದೀಪ್, ಡಾ.ಪ್ರಶಾಂತ್, ಡಾ.ಬಾಲಕೃಷ್ಣ, ಸಂತೃಪ್ತ, ಗಗನ್, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net