

ಮಡಿಕೇರಿ:
ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು ಗುರುವಾರ (ಜು.31) ನಿವೃತ್ತರಾದ ದಾಯನ ರಾಮಕೃಷ್ಣ ಅವರನ್ನು ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.
ತಾವು ಕಲಿತ ಸಂಸ್ಥೆಯಲ್ಲೇ ಶಿಕ್ಷಕರಾಗಿ, ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ವಿಶಿಷ್ಟ ಸೇವೆ ಸಲ್ಲಿಸಿದ ರಾಮಕೃಷ್ಣ ಅವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಕೊಡಗಿನಲ್ಲಿ ಸಾಕ್ಷರ ಕಾವೇರಿ ಅಭಿಯಾನದ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಾರಾಯಣ ಗೌಡ ಮಾತನಾಡಿ, ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಉನ್ನತ ಸ್ಥಾನಕ್ಕೆ ಏರಬಹುದು ಎನ್ನುವುದು ತಪ್ಪು ಕಲ್ಪನೆ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ರಾಮಕೃಷ್ಣ ಅವರೇ ಪ್ರತ್ಯಕ್ಷ ಸಾಕ್ಷಿ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಪರಿಹಾರ ಇಲ್ಲದ ಸಮಸ್ಯೆ ಸಮಸ್ಯೆಯೇ ಅಲ್ಲ. ಇದನ್ನು ಅರಿತುಕೊಂಡು ಜೀವನ ನಡೆಸಿದರೆ ಯಾವುದೂ ಕಷ್ಟವಲ್ಲ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಪುಟ್ಟರಾಜು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಅನುದಾನಿತ ವಿದ್ಯಾಸಂಸ್ಥೆಗಳ ನಿರ್ವಹಣೆ ಸವಾಲಾಗಿರುವ ಇಂದಿನ ದಿನಗಳಲ್ಲಿ ಒಂದು ಸಂಸ್ಥೆಯನ್ನು ಉತ್ತಮ ನಾಯಕತ್ವದಲ್ಲಿ ಮುನ್ನಡೆಸಿದ ಹೆಗ್ಗಳಿಕೆ ರಾಮಕೃಷ್ಣ ಅವರದ್ದು. ಅನುದಾನಿತ ವಿದ್ಯಾಸಂಸ್ಥೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಾಯನ ರಾಮಕೃಷ್ಣ, ಅನುದಾನಿತ ವಿದ್ಯಾಸಂಸ್ಥೆಯಾದ ಅರುಣ ವಿದ್ಯಾಸಂಸ್ಥೆ ಸಂಕಷ್ಟದಲ್ಲಿದೆ. ಹಿರಿಯರು ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ. ಹಿರಿಯ ವಿದ್ಯಾರ್ಥಿಗಳು ಹೆಚ್ಚು ಮುತುವರ್ಜಿ ವಹಿಸಿ ಈ ಸಂಸ್ಥೆಯನ್ನು ಉಳಿಸಲು ಪಣತೊಡಬೇಕು ಎಂದರು.
ಭಾಗಮಂಡಲ ಶ್ರೀ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜೆ. ದಿವಾಕರ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಲೋಕೇಶ್, ಶಿಕ್ಷಕ ಪರಮೇಶ್, ನಿವೃತ್ತ ಶಿಕ್ಷಕ ಸತೀಶ್ ಕುಮಾರ್, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರಾಮಕೃಷ್ಣ ಅವರ ಸೇವೆ ಬಗ್ಗೆ ಮಾತನಾಡಿದರು. ಅರುಣ ಪಿಯು ಕಾಲೇಜು ನೂತನ ಪ್ರಾಂಶುಪಾಲ ಕೆ.ಆರ್. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಮಿಳಾ, ಸಂಸ್ಥೆಯ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ರಾಮಕೃಷ್ಣ ಅವರ ಪತ್ನಿ, ಮಕ್ಕಳು ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಇದ್ದರು.