

ಮಂಗಳೂರು: ಜವಾಬ್ದಾರಿ ಸ್ವೀಕರಿಸಿ, ಸವಾಲುಗಳನ್ನು ಎದುರಿಸಿ ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿರಿಸಿ ನಮ್ಮ ಸಾಮರ್ಥ್ಯ ತೆರೆದಿಟ್ಟಾಗ ಸಾಧಕರಾಗಲು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ರಾಮಕೃಷ್ಣ ಮಿಷನ್‌ನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮಂಗಳವಾರ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಯುವ ಸಬಲೀಕರಣಕ್ಕಾಗಿ ‘ಸ್ಫೂರ್ತಿ’ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯುವಕರಿಗೆ ಮಂಗಳೂರು ರಾಮಕೃಷ್ಣ ಮಠ ಸ್ಫೂರ್ತಿಯಾಗಿದೆ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿದಾಗ ಬದುಕಿಗೆ ಹೊಸ ಚೈತನ್ಯ ಸಿಗುತ್ತದೆ. ಯುವ ಸಮುದಾಯ ಸ್ವಾಮಿ ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಉತ್ತಮ ನಾಯಕತ್ವ ಗುಣ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕೈಗಾರಿಕೋದ್ಯಮಿ ಡಾ.ಜಿ.ರಾಮಕೃಷ್ಣ ಆಚಾರ್ ಅತಿಥಿಯಾಗಿದ್ದರು. ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಂಡು ಮುನ್ನಡೆದಾಗ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಿದೆ. ಕೃಷಿ, ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ಅವಕಾಶವಿದೆ. ಈ ಮೂಲಕ ಗ್ರಾಮದ ಪುನರುತ್ಥಾನದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಮಹಾರಾಜ್ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಲ್ಲಿ ಸಾಧನೆಯ ಛಲ ಬರಲು, ಸ್ಫೂರ್ತಿ ತುಂಬಲು ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಜೀವನದಲ್ಲಿ ಧ್ಯೇಯ ಇಟ್ಟುಕೊಂಡು ಅದನ್ನು ಕಠಿಣ ಪರಿಶ್ರಮದ ಮೂಲಕ ಸಾಧಿಸಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅವಶ್ಯ ಎಂದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಾಮಕೃಷ್ಣ ಮಿಶನ್ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪಾಡಿ ವಂದಿಸಿದರು. ಪ್ರಾಧ್ಯಾಪಕ ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಮೂರನೇ ಅವಧಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ರಮೇತ್ ಚೆನ್ನಿತ್ತಲ, ಮಂಗಳೂರಿನ ದಿಶಾ-ಕಾರಿಯಾರ್ ಟವರ್ಡ್ಸ್ ಎಕ್ಸಲೆನ್ಸ್ ಇದರ ನಿರ್ದೇಶಕಿ ರಾಜೇಶ್ವರಿ ಡಿ. ಶೆಟ್ಟಿ ಹಾಗೂ ಮಂಗಳೂರಿನ ಪೇಪರ್ ಸೀಡ್ ಕಂಪನಿ ಇದರ ಸಂಸ್ಥಾಪಕ ನಿತಿನ್ ವಾಸ್ ಅವರು ಭಾಗವಹಿಸಿದರು. ಪುತ್ತೂರಿನ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಆಡಳಿತ ನಿರ್ದೇಶಕ ಡಾ.ಶ್ರೀಶಾ ಭಟ್ ಸಂವಾದ ನಡೆಸಿಕೊಟ್ಟರು.
ಯುವ ಶಕ್ತಿಯಿಂದ ಸೂಪರ್ ಪವರ್
ಯುವಶಕ್ತಿಯ ಕೊಡುಗೆ 2047ರಲ್ಲಿ ಭಾರತ ಸೂಪರ್ ಪವರ್ ಆಗಲು ನಿರ್ಣಾಯಕ. ಉನ್ನತ ಧ್ಯೇಯ ಇಟ್ಟುಕೊಂಡು ಪರಿಶ್ರಮ ಮಾಡಬೇಕಿದೆ. ನಮ್ಮ ಕಲೆ, ಸಂಸ್ಕೃತಿಯನ್ನು ಅರಿಯುವುದು ಅವಶ್ಯ. ಸ್ವಾವಲಂಬಿ ಬದುಕು ನಮ್ಮದಾಗಬೇಕು ಎಂದು ಕೋಯಿಕ್ಕೋಡ್ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ನರಸಿಂಹಾನಂದ ಹೇಳಿದರು.
ತರುಣರಿಗೆ ಹೀರೋ
ತರುಣರಿಗೆ ಸ್ವಾಮಿ ವಿವೇಕಾನಂದರು ಹೀರೋ ಆಗಬೇಕು. ಹೃದಯದಲ್ಲಿ ಅವರಿಗೆ ಜಾಗ ನೀಡಿ. ವೇಗವಾಗಿ ಮುನ್ನಡೆಯುತ್ತಿರುವ ಭಾರತಕ್ಕೆ ವಿವೇಕಾನಂದರ ತತ್ವಾದರ್ಶದಲ್ಲಿ ಯುವಕರು ಮುನ್ನಡೆಯಬೇಕು. ಅವರ ಬಗ್ಗೆ ಹೆಚ್ಚೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅವರ ಭಾವಚಿತ್ರ ನೋಡುತ್ತ ಧ್ಯಾನ ಮಾಡಿದಾಗ ವಿಶೇಷ ಶಕ್ತಿ ನಮ್ಮೊಳಗೆ ಸೇರಿದ ಅನುಭವಾಗುತ್ತದೆ. 2047ರಲ್ಲಿ ಭಾರತ ಪಡೆಯಲಿರುವ ಶ್ರೇಷ್ಠ ಪದವಿಯಲ್ಲಿ ನಮ್ಮ ಪಾಲು ಇರಲಿ ಎಂದು ಭಾರತ 2047 ವಿವೇಕ ಪಥ ವಿಷಯದಲ್ಲಿ ಉಪನ್ಯಾಸ ನೀಡಿದ ವಾಗ್ಮಿ, ‘ವಿಜಯವಾಣಿ’ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.