ನೆಪಕ್ಕೆ ಅರ್ಜಿ ಪಡಿಬೇಡಿ; ಅಧಿಕಾರಿಗಳಿಗೆ ಶಾಸಕ ರಘುಮೂರ್ತಿ ಚಡಿಏಟು

16 CTD DC NADE HALLI KADE 16 (2)
Published on

ಚಳ್ಳಕೆರೆ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ನೆಪ ಮಾತ್ರಕ್ಕೆ ಅರ್ಜಿ ಪಡೆದು ಕಾನೂನು-ನಿಯಮಗಳನ್ನು ಹೇಳಿಕೊಂಡು ನುಣುಚಿಕೊಳ್ಳಬಾರದು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ, ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಆಶಯದಂತೆ ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಆಗಬೇಕು ಎಂದು ಹೇಳಿದರು.

ಗ್ರಾಮಗಳಲ್ಲಿ ವಯೋವೃದ್ಧರ ಸಾಮಾಜಿಕ ಪಿಂಚಣಿ, ರೈತರ ಪಹಣಿ ತಿದ್ದುಪಡಿ ಮತ್ತು ರಸ್ತೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕೇಳಿಬರುತ್ತಿವೆ. ಇವನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರು ಸಲ್ಲಿಸಿದ ಅರ್ಜಿ ಕುರಿತಂತೆ ಅಧಿಕಾರಿಗಳು ಕ್ರಮ ಕೈಗೊಂಡ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಬಿಪಿಎಲ್ ಪಡಿತರ ರದ್ದು:
ಏಳು 7 ಎಕರೆಗಿಂತ ಹೆಚ್ಚು ಭೂಮಿ ಇರುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಲಾಗಿದೆ. ಇದರಿಂದ ಸಾವಿರಾರು ಬಡ ಕುಟುಂಬಗಳಿಗೆ ತೊಂದರೆಯೂ ಆಗಿದೆ. ಇದರ ಬಗ್ಗೆ ಸರ್ಕಾರದ ಹಂತದಲ್ಲಿ ಪ್ರಸ್ತಾಪ ಮಾಡಿದ್ದು, ಕೆಲ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಬಾರ್‌ಗೆ ಕೊಟ್ಟಿಲ್ಲ ಅವಕಾಶ:
ರಾಮಜೋಗಿಹಳ್ಳಿ ಗ್ರಾಮದಲ್ಲಿ ಅಧಿಕೃತ ಬಾರ್ ಇರುವುದರಿಂದ ಕುಡಿತ ಹೆಚ್ಚಿದೆ. ಸಭೆ ಮಧ್ಯೆ ಕುಡುಕರು ಬಂದು ಗಲಾಟೆ ಮಾಡುತ್ತಿದ್ದಾರೆ. ತಾಲೂಕಿನ ಪ್ರತಿ ಪಂಚಾಯಿತಿ ಎಂಎಸ್‌ಎಲ್ ಬಾರ್ ತೆರೆಯಲು ಸರ್ಕಾರ ಆದೇಶ ಮಾಡಿತ್ತು. ಆದರೆ ನಾನು ಇದಕ್ಕೆ ಅವಕಾಶ ನೀಡದೆ ಗ್ರಾಮೀಣ ಭಾಗದ ಬಡ ಕುಟುಂಬಗಳ ಭದ್ರತೆ ಮತ್ತು ಮಹಿಳೆಯರ ಸಾಮಾಜಿಕ ಭದ್ರತೆ ಕಾರಣದಿಂದ ರದ್ದುಪಡಿಸಿದ್ದೇನೆ ಎಂದು ತಿಳಿಸಿದರು.

ತಹಸೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಸರ್ಕಾರದ ಆದೇಶದಂತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಂದ ಜನಸಾಮಾನ್ಯರ ಸಮಸ್ಯೆಗಳು ಗ್ರಾಮೀಣ ಹಂತದಲ್ಲೇ ಬಗೆಹರಿಯುತ್ತಿವೆ. ಇದರಿಂದ ಶೇ.25ರಷ್ಟು ಜನರು ತಾಲೂಕು ಕಚೇರಿಗೆ ಅಲೆದಾಡುವುದು ತಪ್ಪಿದೆ ಎಂದು ಹೇಳಿದರು.

ಸಾರ್ವಜನಿಕರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಬೇಕು. ಪಂಚಾಯಿತಿ ಹಂತದಲ್ಲಿ ಸಾಮಾಜಿಕ ಪಿಂಚಣಿ, ಜಮೀನು ಪೌತಿ ಬದಲಾವಣೆ, ಪೋಡಿ ದುರಸ್ತಿ ಸಮಸ್ಯೆಗಳಿಗೆ ಆದ್ಯತೆ ನೀಡಲಾಗಿದೆ. ಇಲಾಖೆಯ 150 ಸೇವೆಗಳನ್ನು ಪ್ರಾಮಾಣಿಕವಾಗಿ ಸಕಾಲಕ್ಕೆ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಆರ್.ಎ.ತಿಪ್ಪೇಸ್ವಾವಿ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಚಂದ್ರಯ್ಯ, ತಾಪಂ ಮಾಜಿ ಅಧ್ಯಕ್ಷ ಜಿ.ಟಿ.ತಿಪ್ಪೇಶ್, ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜರೆಡ್ಡಿ ಹಾಗೂ ಗ್ರಾಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net