ರಾಮದುರ್ಗ ಶಾಲಾ ಕೊಠಡಿಗಳು ಶಿಥಿಲ

5knk5
ಕನಕಗಿರಿ ತಾಲೂಕಿನ ರಾಮದುರ್ಗ ಶಾಲೆಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ ಶನಿವಾರ ಭೇಟಿ ನೀಡಿ ಮುಖ್ಯಶಿಕ್ಷಕ ಚನ್ನಬಸವ ಅವರಿಂದ ಮಾಹಿತಿ ಪಡೆದರು. ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಮುಖ್ಯ ಶಿಕ್ಷಕ ಚನ್ನಬಸವ ಇತರರಿದ್ದರು.
Published on

ಕನಕಗಿರಿ: ಶಿಥಿಲಗೊಂಡಿದ್ದ ತಾಲೂಕಿನ ರಾಮದುರ್ಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಹಾಗೂ ತಾಪಂ ಇಒ ರಾಜಶೇಖರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಶಾಲೆಯು ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೇಗೇರಿತ್ತು. ಆದರೆ, ಕೇವಲ 4ಕೊಠಡಿಗಳಿದ್ದು, ಅದರಲ್ಲಿ ಎರಡು ಕೊಠಡಿಗಳು ಶಿಥಿಲಗೊಂಡಿದ್ದರಿಂದ ಮಕ್ಕಳನ್ನು ಶಾಲೆಯ ಬಯಲಿನಲ್ಲಿ, ಇಲ್ಲವೇ ದೇವಸ್ಥಾನದಲ್ಲಿ ಕೂರಿಸಿ ಪಾಠ ಮಾಡಬೇಕಾಗಿದೆ. ಶಾಲೆಗೆ ಜಾಗ ನೀಡುವಂತೆ ಗ್ರಾಮಸ್ಥರಿಂದ ಒತ್ತಡವಿತ್ತು. ಇದಕ್ಕೆ ಸಚಿವರು ಸೇರಿ ಅಧಿಕಾರಿಗಳು ಕಿವಿಗೊಟ್ಟಿರಲಿಲ್ಲ.

ಈ ಕುರಿತು ಜೂ.20ರಂದು ‘ಕೊಠಡಿಗಳ ಸಮಸ್ಯೆ ಶಿಕ್ಷಣಕ್ಕೆ ಪೆಟ್ಟು ’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ಆ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ತಹಸೀಲ್ದಾರ್‌ಗೆ ಜಾಗ ನೀಡುವಂತೆ ಪತ್ರ ಬರೆದಿದ್ದರು. ಇದರಿಂದ ಎಚ್ಚೆತ್ತು ತಹಸೀಲ್ದಾರ್ ವಿಶ್ವನಾಥ ಮುರುಡಿ ಹಾಗೂ ತಾಪಂ ಇಒ ರಾಜಶೇಖರ ರಾಮದುರ್ಗ ಶಾಲೆಗೆ ತೆರಳಿ ಕೊಠಡಿಗಳನ್ನು ಪರಿಶೀಲಿಸಿದರು. ತಾತ್ಕಾಲಿಕವಾಗಿ ಶಾಲೆ ಪಕ್ಕದ ಗೋದಾಮಿನಲ್ಲಿ ಪಾಠ ಮಾಡಲು ಅಧಿಕಾರಿಗಳು ತಿಳಿಸಿದರು.

ತಾಪಂ ಅನುದಾನದಲ್ಲಿ ದುರಸ್ತಿಗೊಳಿಸುವುದಾಗಿ ಇಒ ಭರವಸೆ ನೀಡಿದರೆ, ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗವನ್ನು ಪರಿಶೀಲಿಸಿ ಸರ್ವೇ ಮಾಡಿ ವರದಿ ಸಲ್ಲಿಸಲು ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಅವರಿಗೆ ತಹಸೀಲ್ದಾರ್ ಸೂಚಿಸಿದರು. ಭೂಮಾಪಕ ರಮೇಶ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಮುಖ್ಯಶಿಕ್ಷಕ ಚನ್ನಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net