

ರಾಮದುರ್ಗ: ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಸಂಚಾರ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ನ.12ರಂದು ರಾಮದುರ್ಗದಲ್ಲಿ ನಡೆಯಲಿರುವ ಬಹತ್ ಹೋರಾಟಕ್ಕೆ ಕರವೇ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳ ಪದಾಧಿಕಾರಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮೂಲಕ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. ರಾಮದುರ್ಗ ಮೂಲಕ ಧಾರವಾಡಕ್ಕೆ ಸಂಚಾರ ಕಲ್ಪಿಸುವ ರೈಲ್ವೆ ಮಾರ್ಗದ ಕಾಮಗಾರಿ ಪ್ರಾರಂಭವಾಗುವವರೆಗೆ ಹೋರಾಟಕ್ಕೆ ಕೈಜೋಡಿಸುವುದಾಗಿ ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ವಿಜಯಕುಮಾರ ರಾಠೋಡ, ಗೌರವಾಧ್ಯಕ್ಷ ಜಹೂರ ಹಾಜಿ, ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ ತಿಳಿಸಿದರು.
ರೈಲ್ವೆ ಸಂಪರ್ಕ ಪ್ರಾರಂಭವಾದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ರಾಮದುರ್ಗ ತಾಲೂಕು ಪ್ರಗತಿ ಸಾಧಿಸಲಿದೆ. ಪ್ರವಾಸೋದ್ಯಮ ಅಭಿವದ್ಧಿ, ಸರಕು ಸಾಗಣೆಗೆ ರೈಲ್ವೆ ಮಾರ್ಗ ಸಹಕಾರಿಯಾಗಲಿದ್ದು, ತಾಲೂಕಿನ ಜನತೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ರಾಜಕೀಯ ಮುಖಂಡರು, ವಿದ್ಯಾರ್ಥಿಗಳು ಹೋರಾಟಕ್ಕೆ ಧುಮುಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತ ಸಂಘದ ಮುಖಂಡರಾದ ಹಣಮಂತ ಕಾಮನ್ನವರ, ರೈಲ್ವೆ ಹೋರಾಟ ಸಮಿತಿ ಮುಖಂಡ ಮಹ್ಮದಶಫಿ ಬೆಣ್ಣಿ, ಶಂಕರ ಕೊರವರ, ಕರವೇ ಮಹಿಳಾ ಘಟಕದ ಸ್ಥಳೀಯ ಅಧ್ಯಕ್ಷೆ ರೂಪಾ ಅರಮನಿ, ಉಪಾಧ್ಯಕ್ಷೆ ಶಾರದಾ ಕೇರಿ, ಗ್ರಾಮೀಣಾಧ್ಯಕ್ಷ ಹನುಮಂತ ಕುಲಗೋಡ ಇತರರಿದ್ದರು.