

ಕೊಪ್ಪಳ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದು ರಾಜ್ಯದ ದುರ್ದೈವ. ಗ್ಯಾರಂಟಿ ಯೋಜನೆಗಳಿರುವುದು ಬಿಟ್ಟಿ ಊಟ ಮಾಡುವುದಕ್ಕೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎಸ್.ಎ.ರಾಮದಾಸ ಟೀಕಿಸಿದರು.
ಸುದ್ದಿಗಾರರನ್ನು ಉದ್ದೇಶೀಸಿ ಶುಕ್ರವಾರ ಮಾತನಾಡಿದರು.
ಜನರು 130ಕ್ಕೂ ಹೆಚ್ಚು ಸ್ಥಾನ ನೀಡಿದ್ದಾರೆ. ಆದರೆ, ಅವರಲ್ಲಿ ಆಂತರಿಕ ಕಿತ್ತಾಟ ಶುರುವಾಗಿದೆ. ಆಡಳಿತ ಮಾಡುವ ಬದಲು ಯುದ್ಧ ಮಾಡುವಂತೆ ಅವರ ಹಣೆಬರಹ ಬರೆದಿದೆ. ಜನರು ಲೋಕಸಭೆಯಲ್ಲಿ ಇವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಅವರಂತೆ ರಾಜಕಾರಣ ಮಾಡಿ ಬದುಕುವ ದರ್ದು ನಮಗಿಲ್ಲ. ನಾವು ಜನರ ಊಟ ಸೃಷ್ಟಿಗೆ ಪೂರಕ ಯೋಜನೆ ಮಾಡಿದ್ದೇವೆ.
ಗ್ಯಾರಂಟಿ ಯೋಜನೆಗಳಂತೆ ಬಿಟ್ಟಿ ಊಟಕ್ಕೆ ಮಾಡಿಲ್ಲ. ಪಿಎಂ ವಿಶ್ವ ಕರ್ಮ ಯೋಜನೆ ಬಿಟ್ಟಿ ಊಟಕ್ಕೆ ಅಲ್ಲ. ಊಟಕ್ಕೆ ಬೇಕಾದ ಬಂಡವಾಳ ಸೃಷ್ಟಿಗೆ ಅವಕಾಶ ಸೃಷ್ಟಿಸಿದ್ದೇವೆ. ಗ್ಯಾರಂಟಿ ಯೋಜನೆಗೆ ಪರ್ಯಾಯವಾಗಿ ಇದನ್ನು ಜಾರಿ ಮಾಡಿಲ್ಲ. ಚುನಾವಣೆ ಪ್ರಣಾಳಿಕೆ ಅಲ್ಲ. ರಾಜ್ಯ, ದೇಶಕ್ಕೆ ಪ್ರಧಾನಿ ಮೋದಿ ಏನು ಕೊಟ್ಟಿದ್ದಾರೆ. ಅದನ್ನು ಜನರಿಗೆ ತಲುಪಿಸುತ್ತಿದ್ದೇವೆ ಎಂದರು.