ರಾಮಚಂದ್ರು ಗೆಲುವಿಗೆ ಶ್ರಮಿಸಿ

12-pnp 1
ಪಾಂಡವಪುರದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಗಳು ಮತ್ತು ರೈತ ಸಂಘ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಎಚ್.ತ್ಯಾಗರಾಜು, ಬಿ.ರೇವಣ್ಣ, ಎ.ಎಲ್.ಕೆಂಪೂಗೌಡ ಇತರರು ಇದ್ದರು.
Published on

 ಪಾಂಡವಪುರ: ಸಹಕಾರಿ ಕ್ಷೇತ್ರ ಮತ್ತು ಮನ್‌ಮುಲ್ ಒಕ್ಕೂಟದ ನಿರ್ದೇಶಕನಾಗಿ ಉತ್ತಮ ಸೇವೆ ಸಲ್ಲಿಸಿರುವ ರೈತ ಸಂಘ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕಾಡೇನಹಳ್ಳಿ ರಾಮಚಂದ್ರು ಅವರನ್ನು ಫೆ.2ರಂದು ನಡೆಯಲಿರುವ ಮನ್‌ಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಚುನಾಯಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಗಳು ಮತ್ತು ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ವಿಧಾನಸಭಾ ಚುನಾವಣೆ ನಂತರ ತಾಲೂಕು ಮಟ್ಟದಲ್ಲಿ ನಡೆಯುತ್ತಿರುವ ಪ್ರಮುಖ ಚುನಾವಣೆ ಇದಾಗಿದ್ದು, ನನ್ನನ್ನು ಗೆಲ್ಲಿಸಿದಂತೆ ರಾಮಚಂದ್ರು ಅವರ ಗೆಲುವಿಗೂ ಎರಡು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ರಾಮಚಂದ್ರು ಅವರು ಮನ್‌ಮುಲ್ ನಿರ್ದೇಶಕರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರು ಗೆದ್ದರೆ ಡೇರಿಗಳ ಅಭಿವೃದ್ಧಿ ಮೂಲಕ ಗ್ರಾಮದ ಉದ್ಧಾರ ಆಗಲಿದೆ. ಸದ್ಯ ತಾಲೂಕಿನ ಕೆಲ ಪಿಎಸಿಎಸ್ ಸಂಘಗಳಲ್ಲಿ ಅವ್ಯವಹಾರ ನಡೆದಿದೆ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಮತ್ತು ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆಯ ಸೂಕ್ಷ್ಮತೆ ಅರಿತು ಕೆಲಸ ಮಾಡಬೇಕು ಎಂದು ಕೋರಿದರು.

ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ನಾನು ಮನ್‌ಮುಲ್ ನಿರ್ದೇಶಕನಾಗಿ ಆಯ್ಕೆಯಾಗುವ ಮೊದಲು ತಾಲೂಕು ಹಾಲಿನ ಗುಣಮಟ್ಟದಲ್ಲಿ ಕೊನೆಯ ಸ್ಥಾನದಲ್ಲಿತ್ತು. ಗುಣಮಟ್ಟದ ಹಾಲು ಪೂರೈಕೆಯಾಗದ ಹಿನ್ನೆಲೆಯಲ್ಲಿ ಸರ್ಕಾರದಿಂದ ಉತ್ಪಾದಕರಿಗೆ ಸಿಗುತ್ತಿದ್ದ 40 ಲಕ್ಷ ರೂ. ಸಬ್ಸಿಡಿ ಹಣ ವಾಪಸಾಗುತ್ತಿತ್ತು. ನಾನು ಗೆದ್ದ ಮೇಲೆ ಪ್ರತಿ ಗ್ರಾಮಕ್ಕೂ ತೆರಳಿ ಉತ್ಪಾದಕರಿಗೆ ಗುಣಮಟ್ಟದ ಹಾಲು ಪೂರೈಕೆಯಿಂದಾಗುವ ಲಾಭದ ಬಗ್ಗೆ ಮನವಿರಕೆ ಮಾಡಿಕೊಟ್ಟ ಪರಿಣಾಮ ಪ್ರಸ್ತುತ ತಾಲೂಕು ಗುಣಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ. ತಾಲೂಕಿನಲ್ಲಿ ಮೂರು ಬಿಎಂಸಿ ಕೇಂದ್ರಗಳಿತ್ತು. ಈಗ 11 ಬಿಎಂಸಿ ಕೇಂದ್ರಗಳನ್ನು ಹೊಸದಾಗಿ ಮಂಜೂರು ಮಾಡಿಸಿದ್ದೇನೆ. ಹಲವು ಕಾರಣಗಳಿಂದ ಮರಣ ಹೊಂದಿದ ರಾಸುಗಳ ಮಾಲೀಕರಿಗೆ 4 ಕೋಟಿ ರೂ.ಗೂ ಅಧಿಕ ವಿಮಾ ಹಣ ಕೊಡಿಸಲಾಗಿದೆ. ರೈತ ಕಲ್ಯಾಣ ಟ್ರಸ್ಟ್ ಮೂಲಕ ಉತ್ಪಾಕರಿಗೆ ಸಹಾಯಧನ ವಿತರಿಸಲಾಗಿದೆ ಎಂದರು.

ನಮ್ಮ ವಿರೋಧಿಗಳು ಚುನಾವಣೆ ಗೆಲ್ಲಲ್ಲು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಹಣ ಬರುತ್ತದೆ ಹೋಗುತ್ತದೆ. ಅಧಿಕಾರ ಶಾಶ್ವತ ಅಲ್ಲ. ಆದರೆ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೆವು ಎಂಬುದು ಮುಖ್ಯ. ನನ್ನ ಅಧಿಕಾರಾವಧಿಯಲ್ಲಿ ಏನಾದರೂ ತಪ್ಪಿದ್ದರೆ ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೆ ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಎಲ್ಲವನ್ನು ಕ್ಷಮಿಸಿ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ಚುನಾವಣೆ ಗೆಲ್ಲಲೇಬೇಕೆಂಬ ಪರಿಸ್ಥಿತಿ ಇದೆ. ಡೇರಿ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗೆ ಮತ ಚಲಾವಣೆಯಾಗುವಂತೆ ನಾವು ನೋಡಿಕೊಳ್ಳಬೇಕು. ಚುನಾವಣೆಗೆ ಶಾಸಕರ ಸಹಕಾರ ಸಹಾಯ ಇದ್ದೇ ಇರುತ್ತದೆ. ನಾವು ಮುಂಬರುವ ಮನ್‌ಮುಲ್ ಮತ್ತು ಎಲ್ಲ ಸಹಕಾರ ಸಂಘಗಳ ಚುನಾವಣೆ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದರು.

ಕೆಪಿಸಿಸಿ ಸದಸ್ಯ ಬಿ.ರೇವಣ್ಣ ಮಾತನಾಡಿ, ಪ್ರತಿಷ್ಠಿತ ಚುನಾವಣೆಯಲ್ಲಿ ರೈತ ಸಂಘ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಕೈ ಬಲಪಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಈ ಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿದ್ದು, ಮುಂದಿನ ಎಲ್ಲ ಸ್ಥಳೀಯ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ರೈತ ಮುಖಂಡ ಎಸ್.ದಯಾನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡರಾದ ಸಿ.ಆರ್.ರಮೇಶ್, ವಿಜೇಂದ್ರಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net