ರಾಮರಾಜ್ಯ: ನೆನಪಿನಲ್ಲಿ ಉಳಿಯುವವರು

Ramarajya
Published on

| ಕೃಷ್ಣರಾಜ ಕುತ್ಪಾಡಿ

ಲೋಕದಲ್ಲಿ ಇಬ್ಬರು ಬಹಳ ಕಾಲ ಸಜ್ಜನರ ನೆನಪಿನಲ್ಲಿ, ಇತಿಹಾಸದ ಪುಟಗಳಲ್ಲಿ ಉಳಿಯುತ್ತಾರೆ. ಸತ್ಯದ ಅರಿವಿಗಾಗಿ ಪರಿತಪಿಸುವವನು. ಒಬ್ಬ ಜ್ಞಾನಯೋಗಿ. ಹೃದಯವುಳ್ಳ ಬೌದ್ಧಿಕ ಶ್ರೀಮಂತ. ನುಡಿದಂತೆ ನಡೆದು ತೋರುವವ. ನೊಂದವರಿಗೆ ನೆಮ್ಮದಿಯನ್ನೊದಗಿಸಲು ಬದುಕನ್ನು ಸವೆಸುವವ ಇನ್ನೊಬ್ಬ. ಕರ್ಮಯೋಗಿ. ತೋಳನ್ನು ನಂಬಿಕೊಂಡವನು. ನಡೆಯಿಂದಲೆ ನುಡಿವವನು.

ಅರಿವನ್ನು ಹೊಂದಿ, ನಿಸ್ವಾರ್ಥವಾಗಿ ಹಂಚಿದ ಋಷಿಗಳು, ವಿಜ್ಞಾನಿಗಳು ಸರ್ವದಾ ಲೋಕೋಪಕಾರಕರು. ಉದಾಹರಣೆಗೆ ವೇದವ್ಯಾಸ, ವಸಿಷ್ಠ, ವಿಶ್ವಾಮಿತ್ರಾದಿ ಋಷಿಗಳು. ಚರಕ, ಸುಶ್ರುತ, ಮಿಹಿರ, ಆರ್ಯಭಟ, ಚಾಣಕ್ಯ, ಶಂಕರ, ರಾಮಾನುಜ, ಮಧ್ವರೇ ಮೊದಲಾದವರು ಈ ನೆಲದ ಅರಿವಿನ ಬೇರುಗಳು. ಅರಿವಿನಿಂದ, ಅರಿವಿಗಾಗಿ, ಅರಿವಿನಲ್ಲಿ, ಅರಿಯುತ್ತಲೇ ಬದುಕಿದವರು. ಎಲ್ಲ ರೋಗಗಳಿಗೂ ಮೂಲ ಅರಿವುಗೇಡಿತನ. ಅದನ್ನು ಪರಿಹರಿಸಲು ಜ್ಞಾನದ ವಿಶೇಷ ಮಜಲುಗಳನ್ನು ಲೋಕದ ಮುಂದೆ ತೆರೆದಿಟ್ಟ ಎಲ್ಲ ಹಿರಿಯರು ವಿಜ್ಞಾನಿಗಳೆ. ಇವರನ್ನು ಶಾಸ್ತ್ರಪರಂಪರೆ ಸರ್ವದಾ ಸ್ಮರಿಸುತ್ತಲೇ ಇರುತ್ತದೆ. ಅರಿವು ಹೊಂದಲು ತೊಂದರೆ ನೀಡಿದವರನ್ನು ಬಗ್ಗು ಬಡಿದು ಜನರ ನೆಮ್ಮದಿಗೆಡದಂತೆ ರಕ್ಷಿಸುವ ಮಹಾವೀರರು ಶಾಸ್ತ್ರ ತೇಜಸ್ಕರು. ಕರವನ್ನು ಸ್ವೀಕರಿಸಿ, ಕಾಲದ ಅಗತ್ಯವನ್ನು ಪೂರೈಸಿ, ನಿತ್ಯಜೀವನ ಹಳಿತಪ್ಪದಂತೆ ಕಾಪಿಡುವವರು. ಸ್ವೋಚಿತ ವರ್ಣಾಶ್ರಮ ಧರ್ಮಗಳನ್ನು ಪಾಲಿಸುವಂತೆ ಪ್ರೇರೇಪಿಸುವರು. ಎಲ್ಲರ ಭಾರವನ್ನು ಹೊತ್ತು ಮೇಲೇರುತ್ತ ತನ್ನ ಬಗ್ಗೆ ಚಿಂತಿಸದವನು. ಇದನ್ನೇ ವ್ಯಾಸರೂ ಬೆಂಬಲಿಸಿದ್ದಾರೆ.

ದ್ವಾವಿಮೌ ಪುರುಷವ್ಯಾಘ್ರೌ ಸೂರ್ಯ-ಮಂಡಲ-ಭೇದಿನೌ |

ಪರಿವ್ರಾಟ್ ಯೋಗ ಯುಕ್ತಶ್ಚ ರಣೇಚಾಭಿಮುಖೋ ಹತಃ||

ರಾಜನೆ! ಇಬ್ಬರು ಸೂರ್ಯಮಂಡಲವನ್ನು ಭೇದಿಸಿಕೊಂಡು ಸ್ವರ್ಗವನ್ನು ಹೊಂದುತ್ತಾರೆ. ಸತ್ಯದ ಹುಡುಕಾಟಕ್ಕಾಗಿ ಎಲ್ಲವನ್ನು ತೊರೆದು ಪರಮಾತ್ಮನಿಗೆ ಅಂಟಿಕೊಂಡವನೊಬ್ಬ. ಕಟ್ಟಿಕೊಂಡ ಎಲ್ಲವನ್ನು ಉಳಿಸುವುದಕ್ಕಾಗಿ, ಸಾವಿಗೆ ಬೆದರದೆ ಅದರತ್ತ ಮುಖ ಮಾಡಿಯೇ ನಡೆದವ ಮತ್ತೊಬ್ಬ. ಶ್ರೀರಾಮ ಎರಡೂ ಆಗಿದ್ದ. ತಂದೆಯ ಮಾತನುಳಿಸಲು ನಡೆದು ನುಡಿದ. ಕಳೆದುದನು ಪಡೆಯಲು ಹೋರಾಟ ನಡೆಸಿ, ದುಡಿದು ನಡೆದ.

ತೊರೆದ ರಾಜ್ಯಕ್ಕಾಗಿ ಪರಿತಪಿಸಲಿಲ್ಲ. ಪಡೆದ ರಾಜ್ಯವನ್ನು ಎಂದೂ ತೊರೆಯಲಿಲ್ಲ. ಹಾಗಾಗಿ ಶ್ರೀರಾಮ ಇಂದಿಗೂ ಆದರ್ಶನೆನಿಸಿ ಹಲವಾರು ಸಜ್ಜನ ಹೃದಯಗಳನ್ನು ಗೆಲ್ಲುತ್ತಲೇ ಇದ್ದಾನೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net