ಹುಬ್ಬಳ್ಳಿ: ಶ್ರೀರಾಮ ನವಮಿ ನಿಮಿತ್ತ ಇಲ್ಲಿಯ ವೇದಪೀಠದ ಅಧ್ಯಕ್ಷ ಡಾ. ಕಂಠಪಲ್ಲೀ ಗುರುಗಳಿಂದ ಶ್ರೀರಾಮ ದರ್ಬಾರ್ ಪೂಜೆ ವೈಭವ ಮತ್ತು ಶ್ರೀಚಕ್ರ ಶಕ್ತಿಪೀಠ ಪೂಜೆ ಉತ್ಸವವು ಯುಗಾದಿ ಹಬ್ಬದ ದಿನ ಮಾ. 30ರಿಂದ ಆರಂಭವಾಗಲಿದೆ.
ಕಂಠಪಲ್ಲೀ ವೇದಪೀಠ ಟ್ರಸ್ಟ್ ಆಶ್ರಯದಲ್ಲಿ ಮತ್ತು ಶ್ರೀಸಿಂಹಗೀತಾ ಪ್ರತಿಷ್ಠಾನಮ್ ಟ್ರಸ್ಟ್ ಮತ್ತು ಮಧ್ವಭಾರತೀ ವೇದಪೀಠಗಳ ಸಹಯೋಗದಲ್ಲಿ ವಿವಿಧ ಬಡಾವಣೆಗಳ ಭಕ್ತರ ನಿವಾಸಗಳಲ್ಲಿ ಶ್ರೀರಾಮ ದರ್ಬಾರ್ ಪೂಜೆಯನ್ನು ನಡೆಸಲಾಗುತ್ತದೆ. ಜೊತೆಗೆ ಐಶ್ವರ್ಯ ವೃದ್ಧಿಗಾಗಿ ಪೂಜೆಯನ್ನು ಆಯೋಜಿಸಲಾಗಿದೆ.
ರಾಮರಕ್ಷಾ ಸ್ತೋತ್ರ ಪಾರಾಯಣ, ಶ್ರೀಲಕ್ಷ್ಮೀಹೃದಯ, ವೇದಮಂತ್ರ ನಿನಾದಗಳಿಂದ ನಡೆಯುವ ಶ್ರೀರಾಮ ದರ್ಬಾರ್ ಪೂಜೆ ಮತ್ತು ಶ್ರೀಚಕ್ರ ಶಕ್ತಿಪೀಠ ಪೂಜೆಗಳಿಂದ ಇಷ್ಟಾರ್ಥಸಿದ್ಧಿಯಾಗುವುದಲ್ಲದೇ ಭಾರತೀಯ ಧರ್ಮ ರಕ್ಷಣೆಯಾಗುತ್ತದೆ.
ಈ ಪೂಜೆಯ ವೈಶಿಷ್ಟ್ಯವೆಂದರೆ ಸೀತಾಂಜನೇಯ ಲಕ್ಷ್ಮಣ ಸಹಿತರಾದ ಭಗವಾನ್ ಶ್ರೀರಾಮಚಂದ್ರದೇವರ ದಿವ್ಯವಾದ, ಪ್ರತಿಮೆಗಳು - ಶ್ರೀಚಕ್ರ ಶಕ್ತಿಪೀಠವು ಮಹಾಕ್ಷೇತ್ರ ರಾಮೇಶ್ವರ-ಧನುಷ್ಕೋಟಿ ಮತ್ತು ಕನ್ಯಾಕುಮಾರಿ ಸನ್ನಿಧಾನದಲ್ಲಿ ಜ್ಞಾನಯೋಗಿಗಳಿಂದ ವೇದಪೀಠಕ್ಕೆ ಲಭ್ಯವಾಗಿದೆ.
ನಗರದ ಪ್ರಮುಖರಾದ ಡಾ. ಕಿಶೋರ ಬಾಗಲಕೋಟ, ಕಮಲನಯನ ಮೆಹತಾ, ಮೋಹಿತ ಮೆಹತಾ, ಡಾ. ರಾಘವೇಂದ್ರ ದೇಶಪಾಂಡೆ, ವಿಜಯೀಂದ್ರ ಬಾಗಲ್, ಆನಂದ ಘಳಗಿ, ಹನುಮಂತರಾವ್ ಕುಲಕರ್ಣಿ, ಗಿರೀಶ ದೇಸಾಯಿ, ವಿಜಯಕುಮಾರ್ ಕಾರಿಕಾಯಿ, ಸಿದ್ಧಾರೂಢ ಕೊರಟಗಿ ಇವರ ನಿವಾಸಗಳಲ್ಲಿ ಪೂಜೆ ಕಾರ್ಯಕ್ರಮಗಳು ಆಯೋಜಿತವಾಗಿದೆ.
ಸಾಮೂಹಿಕವಾಗಿ ಏ. 6ರಂದು ಸಂಜೆ 7ಕ್ಕೆ ಶ್ರೀರಾಮನವಮಿ ದಿನದಂದು ನವನಗರದ ಶ್ರೀರಾಘವೇಂದ್ರ ಮಠದಲ್ಲಿ ಶ್ರೀರಾಮ ದರ್ಬಾರ್ ಪೂಜೆ ಹಾಗೂ ಶ್ರೀಚಕ್ರ ಶಕ್ತಿಪೀಠ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ದಿನಗಳಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಭಕ್ತರು ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವೇದಪೀಠದ ಪ್ರಕಟಣೆ ಕೋರಿದೆ.