

ಉಡುಪಿ: ರಾಮಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ರಾಮನವಮಿ ಪರ್ವದಿನ ಗುರುವಾರ ಪೇಜಾವರ ಮಠದ ಆರ್ಥಿಕ ಸಹಕಾರದಲ್ಲಿ ಆಸರೆ ಟ್ರಸ್ಟ್ ವತಿಯಿಂದ ನಿರ್ಮಿಸಿದ ಕಲ್ಯಾಣಪುರದ ಗಿರಿಜಾ ಪೂಜಾರ್ತಿ ಮತ್ತು ಬ್ರಹ್ಮಾವರದ ಹೇರೂರಿನ ಜಲಜ ಶೆಡ್ತಿ ಮನೆಗಳ ಗೃಹಪ್ರವೇಶೋತ್ಸವ ಗೋಧೂಳಿಯ ಮುಹೂರ್ತದಲ್ಲಿ ನೆರವೇರಿತು.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನೆಗಳನ್ನು ಉದ್ಘಾಟಿಸಿ, ಮನೆಮಂದಿಗೆ ಹೊಸಬಟ್ಟೆ , ರಾಮ-ಕೃಷ್ಣ ದೇವರ ಚಿತ್ರ, ದೀಪ ಮತ್ತು ನಿತ್ಯ ಭಜನೆಗಾಗಿ ತಾಳ ಮತ್ತು ಫಲಮಂತ್ರಾಕ್ಷತೆ ನೀಡಿ ಹರಸಿದರು. ಎರಡು ಮನೆಗಳಿಗೆ ಅಯೋಧ್ಯಾ ಮತ್ತು ಶ್ರೀರಾಮ್ಸದನ ಎಂಬ ಹೆಸರಿಡಲಾಯಿತು. ಉದ್ಯಮಿ ಭುವನೇಂದ್ರ ಕಿದಿಯೂರು ಎರಡೂ ಮನೆಗಳಿಗೆ ತಲಾ ಐದು ಕುರ್ಚಿಗಳನ್ನು ನೀಡಿದರು.
ಆಸರೆ ಟ್ರಸ್ಟ್‌ನ ರಾಘವೇಂದ್ರ ಕಿಣಿ , ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣು ಆಚಾರ್ಯ, ಕೃಷ್ಣ ಭಟ್ , ಕಲ್ಯಾಣಪುರ ಗ್ರಾ.ಪಂ ಅಧ್ಯಕ್ಷ ಕೃಷ್ಣ ದೇವಾಡಿಗ , ಗಣೇಶ ಕುಲಾಲ್, ವೀಣಾ ನಾಯ್ಕ್, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ, ಮಂಗಳೂರು ಮಾಜಿ ಮೇಯರ್ ಗಣೇಶ ಹೊಸ ಬೆಟ್ಟು , ಅಪ್ಪು ಜತ್ತನ್ ಮೊದಲಾದವರಿದ್ದರು.