ಭಂಡಾರ ಕೇರಿ ಮಠದಲ್ಲಿ ರಾಮನವಮಿ ಮಹೋತ್ಸವ

dd
Published on

 ಪ್ರವಚನ , ಸಂಗೀತ, ನೃತ್ಯ ಮತ್ತು ಅಮೃತೋಪದೇಶ ಆಯೋಜನೆ

ಬೆಂಗಳೂರು: ಬೆಂಗಳೂರಿನ ಗಿರಿನಗರದಲ್ಲಿರುವ ಉಡುಪಿ ಭಂಡಾರ ಕೇರಿ ಮಠದಲ್ಲಿ ರಾಮ ನವಮಿ ಸಂಭ್ರಮಕ್ಕೆ ವೇದಿಕೆ ಸನ್ನದ್ಧವಾಗಿದೆ. 22ನೇ ವರ್ಷದ ಶ್ರೀ ರಾಮನವಮಿ ಮಹೋತ್ಸವದ ಅಂಗವಾಗಿ ಪ್ರವಚನ , ಸಂಗೀತ, ನೃತ್ಯ ಉತ್ಸವ ಮತ್ತು ಅಮೃತೋಪದೇಶ ಆಯೋಜನೆ ಗೊಂಡಿದೆ. ಏ.3ರ ಸಂಜೆ 5.30ಕ್ಕೆ ಖ್ಯಾತ ಗಾಯಕರಾದ ಅಕ್ಷಯ್ ಮತ್ತು ಅಭಿಷೇಕ್ ಸಂಗಡಿಗರು ಶ್ರೀ ವಿದ್ಯೇಶ ವಿಠಲಾಂಕಿತ ಕೃತಿಗಳ ಆಧಾರಿತ ಸಂಗೀತ ಮಹೋತ್ಸವ ನಡೆಸಿಕೊಡಲಿದ್ದಾರೆ.

ನರ್ತನ ವೈಭವ: ಏ. 4ರ ಸಂಜೆ 5.30ಕ್ಕೆ ಮಯೂರಿ ನಾಟ್ಯಶಾಲೆಯ ವಿದುಷಿ ಪ್ರಜ್ಞಾ ಹರಿದಾಸ ಭಟ್ ಶಿಷ್ಯರು ಶ್ರೀ ವಿದ್ಯೇಶ ವಿಠಲ ಅಂಕಿತ ಕೃತಿಗಳನ್ನು ಆಧರಿಸಿ ನೃತ್ಯೋತ್ಸವ ಪ್ರಸ್ತುತ ಪಡಿಸಲಿದ್ದಾರೆ. 10 ಕಲಾವಿದರು ನರ್ತನ ಮಾಡುತ್ತಿರುವುದು ವಿಶೇಷವಾಗಿದೆ. ಏ. 5ರಿಂದ 7ರವರೆಗೆ ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರತಿದಿನವೂ ಸಂಜೆ 5:30ಕ್ಕೆ ‘ಶ್ರೀಮದ್ ರಾಮಾಯಣದ ಪ್ರೇರಣಾದಾಯಕ ಚಿಂತನ’ ಕಾರ್ಯಕ್ರಮ ಸರಣಿ ನಡೆಯಲಿದೆ. ಹಿರಿಯ ವಿದ್ವಾಂಸರಾದ ಆನಂದ ತೀರ್ಥಾಚಾರ್ಯ, ವೆಂಕಟೇಶ ಆಚಾರ್ಯ, ನಾಗರಾಜ ಆಚಾರ್ಯ, ವಿಜಯಸಿಂಹ ಆಚಾರ್ಯ, ಶ್ರೀನಿಧಿ ವಾಸಿಷ್ಠ ಶಿಷ್ಠ ಮತ್ತು ನಾಗೇಂದ್ರ ಆಚಾರ್ಯ ಅವರು ರಾಮಾಯಣದ ವಿಶೇಷ ಪ್ರಸಂಗಗಳನ್ನು ಕುರಿತು ವಿದ್ವತ್ಪೂರ್ಣ ಉಪನ್ಯಾಸ ನೀಡಲಿದ್ದಾರೆ. ನಂತರ ವಿದ್ಯೇಶ ತೀರ್ಥ ಸ್ವಾಮೀಜಿ ಶಿಖರಪ್ರಾಯ ಅಮೃತೋಪದೇಶ ನೀಡಲಿದ್ದಾರೆ.

ರಥೋತ್ಸವ: ರಾಮನವಮಿ ಪ್ರಯುಕ್ತ ಏ. 6 ರ ಶ್ರೀಮಠದಲ್ಲಿ ಬೆಳಗ್ಗೆ 7.30 ರಿಂದ ಸಂಸ್ಥಾನ ಪ್ರತಿಮಾ ಶ್ರೀ ಕೋದಂಡರಾಮ ದೇವರಿಗೆ ಪಂಚಾಮೃತ ಅಭಿಷೇಕ, ನಂತರ ಸಂಸ್ಥಾನ ಪೂಜೆ, ಸಂಜೆ 6 ಕ್ಕೆ ರಂಗ ಪೂಜೆ, 7 ಕ್ಕೆ ಕೋದಂಡರಾಮ ದೇವರ ರಥೋತ್ಸವ ಗಿರಿನಗರದ ಪ್ರಮುಖ ಬೀದಿಗಳಲ್ಲಿ ಸಂಪನ್ನ ಗೊಳ್ಳಲಿದೆ. ಏಪ್ರಿಲ್ 7 ರಂದು ಮಠದಲ್ಲಿ ಬೆಳಗಿನ ಅವಧಿಯಲ್ಲಿ ರಾಮ ತಾರಕ ಹೋಮ ಮತ್ತು ಸಂಜೆ ಶ್ರೀಮದ್ ರಾಮಾಯಣ ಪ್ರವಚನದ ಮಂಗಳ ಮಹೋತ್ಸವ ನೆರವೇರಲಿದೆ ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net