ರಾಮಮಂದಿರಕ್ಕೆ ಪ್ರತೀವರ್ಷ ಹರಿದು ಬರುತ್ತಿದೆ 100 ಕೋಟಿ ರೂ. ದೇಣಿಗೆ

shri_vishvaprasanna_swamiji
Published on

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಈಗಲೂ ಕೂಡ ಜನರು ಭಕ್ತಿಯಿಂದ ಕಾಣಿಕೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 100 ಕೋಟಿ ರೂ. ದೇಣಿಗೆ ಸಂಗ್ರಹವಾಗುತ್ತಿದೆ. ಸರಿಯಾದ ರೀತಿಯಲ್ಲಿ ಹಣದ ವಿನಿಯೋಗ ಮಾಡಲಾಗುತ್ತಿದೆ ಎಂದು ರಾಮಜನ್ಮಭೂಮಿ ಟ್ರಸ್ಟ್ ಸದಸ್ಯ , ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರ ನಿರ್ಮಾಣ ಮಾಡಲು ಪ್ರಾರಂಭದಲ್ಲಿ 400 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಖರ್ಚುವೆಚ್ಚಗಳು ಹೆಚ್ಚಾಗಿದ್ದು, ಮಂದಿರ ಪೂರ್ಣಗೊಳ್ಳುವಾಗ 1300 ಕೋಟಿ ಖರ್ಚು ಅಂದಾಜಿಸಲಾಗಿದೆ. 2024ರಲ್ಲಿ ಮಕರ ಸಂಕ್ರಾಂತಿಯ ಸಮಯದಲ್ಲಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಲು ತೀರ್ಮಾನವಾಗಿದೆ ಎಂದು ತಿಳಿಸಿದರು.

ಬಲಿದಾನಿಗಳ ನೆನಪು
ರಾಮೇಶ್ವರದಿಂದ ಕಾಶ್ಮೀರದವರೆಗೆ ರಥಯಾತ್ರೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸಲಹೆ ನೀಡಿದ್ದೇನೆ. ದೇಶದ ನಾಗರಿಕರೆಲ್ಲ ರಾಮಮಂದಿರ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಗೊಳಿಸುವುದು ಉದ್ದೇಶ. ರಾಮಾಯಣದ ಕಥೆಯಲ್ಲಿ ಹನುಮಂತನ ಪಾತ್ರ ದೊಡ್ಡದು. ಹನುಮನ ಅವತಾರದ ಕ್ಷೇತ್ರ ನಮ್ಮ ಕರ್ನಾಟಕ. ಇದು ಕನ್ನಡಿಗರಿಗೆ ತುಂಬಾ ಹೆಮ್ಮೆಯ ವಿಚಾರ. ಆ ಸಂಬಂಧವನ್ನು ಶಾಶ್ವತಗೊಳಿಸಲು ಉಳಿಸಲು ಕರ್ನಾಟಕದ ಸ್ವರ್ಣ ಶಿಖರವನ್ನು ಅಯೋಧ್ಯೆಯ ರಾಮನಿಗೆ ಸಮರ್ಪಿಸಲು ತೀರ್ಮಾನಿಸಲಾಗಿದೆ. ಅಯೋಧ್ಯೆಯ ವಿಮೋಚನೆಗೋಸ್ಕರ ಆಯಾ ಪ್ರಾದೇಶಿಕ ಪ್ರದೇಶಗಳಲ್ಲಿ ಜೀವತೆತ್ತವರಿದ್ದಾರೆ. ಅಂಥವರನ್ನು ಸ್ಮರಿಸಿ ಯಾತ್ರೆ ಸಾಗಬೇಕು. ಮುಂದಿನ ಜನಾಂಗಕ್ಕೂ ರಾಮಪ್ರಜ್ಞೆ ಉಳಿಯಬೇಕೆಂಬುದು ಯಾತ್ರೆ ಆಶಯ ಎಂದರು.

ರಾಮದೇವರ ಪ್ರತಿಮೆ ವಿಚಾರವೂ ಚರ್ಚೆಯಾಗಿದೆ. ಹಿರಿಯ ರಾಮನೋ ಅಥವಾ ಬಾಲರಾಮನೋ ಎಂಬ ಬಗ್ಗೆ ಚರ್ಚೆ ನಡೆಯಿತು. ಹಿಂದಿನಿಂದಲೂ ಅಯೋಧ್ಯೆಯಲ್ಲಿ ಬಾಲರಾಮನ ಸನ್ನಿಧಾನವಿತ್ತು. ಹಾಗಾಗಿ ಬಾಲರಾಮನ ಪ್ರತಿಮೆಯನ್ನೇ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ತುಂಬಾ ಎತ್ತರದ ಪ್ರತಿಮೆ ಮಾಡಿದರೆ ಬಾಲರಾಮನ ಕುರುಹು ಕಾಣುವುದಿಲ್ಲ. ಹಾಗಾಗಿ ಕಣ್ಣಳತೆಗೆ ಸರಿಯಾಗಿ ಪುಟ್ಟ ವಿಗ್ರಹ ಇರಬೇಕು. ಕಣ್ಣಳತೆಗೆ ಸರಿಯಾಗಿ ರಾಮದೇವರ ಮುಖ ಬರುವಂತೆ ವಿಗ್ರಹ ನಿರ್ಮಾಣವಾಗಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net