ರಾಮಮಂದಿರ ದೇಣಿಗೆ ಕಡ್ಡಾಯವಲ್ಲ: ಪೇಜಾವರ ಶ್ರೀ ಸ್ಪಷ್ಟನೆ

pejavarshree Shri
Published on

ಉಡುಪಿ: ರಾಮಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತು ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಆಧಾರರಹಿತ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಆರೋಪಕ್ಕೆ ಸರಿಯಾದ ದಾಖಲೆ ಒದಗಿಸಬೇಕು. ರಾಮಜನ್ಮಭೂಮಿ ಟ್ರಸ್ಟ್ ಅಥವಾ ಆರೆಸ್ಸೆಸ್ ಕಾರ್ಯಕರ್ತರಿಗೆ ಇಂಥ ಯಾವುದೇ ಸೂಚನೆ ನೀಡಿಲ್ಲ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪೇಜಾವರ ಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ನಿಧಿ ಸಮರ್ಪಣೆ ಮಾಡುವಂತೆ ಒತ್ತಾಯಿಸುವುದಿಲ್ಲ. ಇಷ್ಟವಿದ್ದವರು ನೀಡಬಹುದು. ರಾಮ ಜನ್ಮಭೂಮಿಯ ನಿಧಿ ಸಂಗ್ರಹ ಪಾರದರ್ಶಕವಾಗಿ ನಡೆಯುತ್ತಿದೆ. ದೇಶದ ಪ್ರತಿಯೊಂದು ರಾಮಭಕ್ತರ ಮನೆಯನ್ನು ಸಂಪರ್ಕಿಸಬೇಕು ಎನ್ನುವುದು ಟ್ರಸ್ಟ್ ಉದ್ದೇಶ. ದೇಣಿಗೆ ಕೊಟ್ಟವರ ದಾಖಲೆಗಾಗಿ ರಶೀದಿ ನೀಡುತ್ತಿದ್ದೇವೆ. ಜನರ ಆಸಕ್ತಿ ನಿರೀಕ್ಷೆಗಿಂತ ಹೆಚ್ಚಾಗಿದ್ದು, ರಶೀದಿ ಪುಸ್ತಕ ಕೊರತೆ ಉಂಟಾಗಿದೆ. ಹೀಗಾಗಿ ಕಾರ್ಯಕರ್ತರು ಸಂಪರ್ಕಿಸದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದಾರೆ. ಇದು ನಿಧಿ ಸಮರ್ಪಣೆ ಮಾಡದವರನ್ನು ಗುರುತಿಸುವ ಪ್ರಕ್ರಿಯೆಯಲ್ಲ. ಬಿಟ್ಟುಹೋಗಿರುವ ಮನೆ ಮರು ಸಂಪರ್ಕ ಮಾಡುವ ಕಾರ್ಯ ಎಂದರು.
ಜನ್ಮಭೂಮಿ ವಿವಾದಿತ ಪ್ರದೇಶ ಎನ್ನುವವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುವುದಿಲ್ಲ. ದೇಶದ ಸಂವಿಧಾನವನ್ನು ಮಾನ್ಯ ಮಾಡುವವರು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಒಪ್ಪುತ್ತಾರೆ. ಅದಕ್ಕೆ ಗೌರವ ನೀಡದವರ ದೇಶ ನಿಷ್ಠೆ ಬಗ್ಗೆ ಸಂದೇಹಪಡುವಂತಾಗಿದೆ ಎಂದು ಶ್ರೀಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net