ನನಸಾಗುತ್ತಿದೆ ರಾಮ ಮಂದಿರ ಕನಸು

sri ram temple
Published on

ಗಸ್ಟ 5ರಂದು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದ್ದು, ಶತಮಾನಗಳ ಕನಸು ಈಡೇರುವ ಕ್ಷಣಕ್ಕೆ ದೇಶ ಕಾತರದಿಂದ ಕಾಯುತ್ತಿದೆ. ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ನಡೆದ ರಥಯಾತ್ರೆ, ಚಳವಳಿ, ಆಂದೋಲನಗಳಿಗೆ ದೀರ್ಘ ಇತಿಹಾಸವೇ ಇದೆ. ದೇಶದ ಸಾಧು-ಸಂತರು ಇದನ್ನು ಧರ್ಮವಿಜಯದ ಹೋರಾಟದಂತೆಯೇ ನಡೆಸಿಕೊಂಡು ಬಂದರು. ಸಾವಿರಾರು ಕರಸೇವಕರು ತಮ್ಮ ಪ್ರಾಣವನ್ನೇ ಈ ಹೋರಾಟಯಜ್ಞಕ್ಕೆ ಆಹುತಿಯಾಗಿ ಸಮರ್ಪಿಸಿದರು. ರಾಮ ಮಂದಿರ ನಿರ್ಮಾಣ ಈ ದೇಶದ ಅಸ್ಮಿತೆಯ ಪ್ರಶ್ನೆಯಾಗಿತ್ತು.

ಅಯೋಧ್ಯೆ ಮತ್ತು ಶ್ರೀರಾಮಚಂದ್ರ ಈ ದೇಶದ ಶ್ರದ್ಧಾಬಿಂದುಗಳು ಮಾತ್ರವಲ್ಲ ಆತ್ಮಶಕ್ತಿಯ ಪ್ರತೀಕವೂ ಹೌದು. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಪರಿಸರದಲ್ಲಿ ಭವ್ಯ ಮಂದಿರ ನಿರ್ಮಾಣ ಆಗಬೇಕು ಎಂದು ಸಂಕಲ್ಪಿಸಿ ಕೈಗೊಂಡ ಹೋರಾಟ ಚಾರಿತ್ರಿಕ. ‘ರಾಮ್ ಲಲಾ ಹಮ್ ಆಯೇಂಗೇ ಮಂದಿರ್ ವಹೀ ಬನಾಯೆಂಗೇ’ ಎಂದು ಗರ್ಜಿಸುತ್ತ ಲಕ್ಷಾಂತರ ಕರಸೇವಕರು ಸಂತರು-ಸಾಧುಗಳು, ಧರ್ಮಾಚಾರ್ಯರ ಮಾರ್ಗದರ್ಶನದಲ್ಲಿ ಸಾಗಿದರು. ಆಕ್ರಮಣದ ಕಳಂಕವನ್ನು ತೊಡೆದು ಹಾಕಲು ಶ್ರಮಿಸಿದರು. ಈ ಹೋರಾಟದ ಹಾದಿಯೇ ರಾಷ್ಟ್ರವಾದಿ ಶಕ್ತಿಗಳಿಗೆ ಪ್ರೇರಣೆ, ಪರಂಪರೆಯನ್ನು ಮರುಸ್ಥಾಪಿಸುವ ಉತ್ಸಾಹ ನೀಡಿತು. ರಾಷ್ಟ್ರಭಾವದ ಪ್ರಕಟೀಕರಣಕ್ಕೆ ಸಾಧ್ಯವಾಯಿತು.

ವಿಹಿಂಪ ಆಂದೋಲನ: ಮಂದಿರ ನಿರ್ಮಾಣ ವಿಚಾರ 1989ರಲ್ಲಿ ವೇಗ ಪಡೆದುಕೊಂಡಾಗ ವಿಹಿಂಪ ಹಾಗೂ ಹಲವು ಹಿಂದುಪರ ಸಂಘಟನೆಗಳು ದೇಶದ ಎಲ್ಲ ರಾಜ್ಯಗಳ ಹಳ್ಳಿ-ಹಳ್ಳಿಗಳಿಂದ ಶ್ರೀರಾಮನ ಹೆಸರನ್ನು ಬರೆದ ಇಟ್ಟಿಗೆಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದವು. ಪರಿಣಾಮವಾಗಿ, ಸುಮಾರು 3-4 ಲಕ್ಷ ಇಟ್ಟಿಗೆಗಳು ರಾಮಘಾಟ್‌ನಲ್ಲಿ ಸಂಗ್ರಹಗೊಂಡವು. ‘ಶ್ರೀರಾಮ’ ಎಂದು ಕನ್ನಡ ಸೇರಿ ವಿವಿಧ ಭಾರತೀಯ ಭಾಷೆಗಳಲ್ಲಿ ಬರೆದ ಇಟ್ಟಿಗೆಗಳು ಈಗಲೂ ಇಲ್ಲಿವೆ.

ರಾಮ ರಥಯಾತ್ರೆ: ರಾಮ ಮಂದಿರ ನಿರ್ಮಾಣ ಯೋಜನೆ ಚಳವಳಿ ರೂಪ ಪಡೆದಿದ್ದು 1990ರಲ್ಲಿ. ಎಲ್.ಕೆ.ಆಡ್ವಾಣಿ ನೇತೃತ್ವದಲ್ಲಿ 1990ರ ಸೆ.25ರಿಂದ ಅಕ್ಟೋಬರ್ 30ರತನಕ ಸೋಮನಾಥದಿಂದ ಅಯೋಧ್ಯೆವರೆಗೆ ಬಿಜೆಪಿ 10 ಸಾವಿರ ಕಿಲೋಮೀಟರ್ ರಾಮ ರಥಯಾತ್ರೆ ಹಮ್ಮಿಕೊಂಡಿತ್ತು. ಹೋರಾಟಕ್ಕೆ ತಿರುವು ನೀಡಿದ ಘಟನೆ: ಅದಷ್ಟೇ ಉತ್ತರ ಪ್ರದೇಶದಲ್ಲಿ ಮುಲಾಯಂ ಸರ್ಕಾರ ಪತನವಾಗಿ ಕಲ್ಯಾಣ್ ಸಿಂಗ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕೇಂದ್ರದಲ್ಲೂ ನರಸಿಂಹ್ ರಾವ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ ಅಯೋಧ್ಯೆಯಲ್ಲಿ ಎರಡನೇ ಬಾರಿಗೆ ಕರಸೇವೆ ನಡೆಯಿತು. ಡಿಸೆಂಬರ್ 4ರಂದೇ ಅಯೋಧ್ಯೆಯಲ್ಲಿ ಲಕ್ಷಾಂತರ ರಾಮಭಕ್ತರು ಜಮಾಯಿಸಿದ್ದರು.

ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಡಿ.6ರಂದು ನಿಗದಿಯಂತೆ ಕರಸೇವೆ ನಡೆಯುತ್ತಿತ್ತು. ಅಂದು ಪೂರ್ವಾಹ್ನ 11 ಗಂಟೆಯವರೆಗೂ ಎಲ್ಲ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುತ್ತಿದ್ದವು. ಅಷ್ಟೊತ್ತಿಗಾಗಲೇ ಕೆಲ ಯುವ ಕರಸೇವಕರು ವಿವಾದಿತ ಬಾಬ್ರಿ ಕಟ್ಟಡದ ಗುಂಬಜವನ್ನು ಏರಿ ನೋಡನೋಡುತ್ತಿದ್ದಂತೆ ಗುಂಬಜ ಧ್ವಂಸಗೊಳಿಸಿದರು. ಇದರಿಂದ ಭಾವೋದ್ವೇಗಕ್ಕೆ ಒಳಗಾದ ಸಾವಿರಾರು ಕಾರ್ಯಕರ್ತರು ಕೆಲ ಹೊತ್ತಲೇ ವಿವಾದಿತ ಕಟ್ಟಡವನ್ನು ಇಡೀಯಾಗಿ ನೆಲಸಮ ಮಾಡಿದ್ದರು. ಇತ್ತ ಲಾಲಕೃಷ್ಣ ಆಡ್ವಾಣಿ, ಸಾಧ್ವಿ ಉಮಾಭಾರತಿ ಸೂಚನೆ ನೀಡುತ್ತಿದ್ದರೂ ಅದಕ್ಕೆ ಕಿವಿಗೊಡದೆ ಕರಸೇವಕರ ಪಡೆ ಸಂಜೆ 7 ಗಂಟೆ ಹೊತ್ತಿಗೆ ಆ ಕಟ್ಟಡವನ್ನು ಧ್ವಂಸಗೊಳಿಸಿಯೇ ನಿರಾಳವಾಯಿತು.

ಗುಂಬಜವೇರಿದ ರಾಮಭಕ್ತರ ಮೇಲೆ ಗುಂಡು ಹಾರಿಸಲು ಉತ್ತರ ಪ್ರದೇಶದ ಪೊಲೀಸರು ನಿರಾಕರಿಸಿದರು. ಆದರೆ, ಇಂಡೋ-ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ೆರ್ಸ್ ಜವಾನರು ಗುಂಡು ಹಾರಿಸಿದ್ದರಿಂದ ಹಲವಾರು ಕರಸೇವಕರು ಪ್ರಾಣ ಕಳೆದುಕೊಂಡರು. ಸಂಘರ್ಷಗಳಲ್ಲಿ 50 ಕರಸೇವಕರು ಪ್ರಾಣ ಕಳೆದುಕೊಂಡರು. ಘಟನೆಯ ಬಳಿಕ ಇಡೀ ಅಯೋಧ್ಯೆಯನ್ನು ಒಂದು ದ್ವೀಪದಂತೆ ಮಾಡಲಾಯಿತು. 120 ಕಂಪನಿಗಳ ಅಗಾಧ ಸಂಖ್ಯೆಯ ಪೊಲೀಸ್, ಆರು ಸೈನಿಕ ಪಡೆಗಳ ಟೆಂಟ್‌ಗಳು ಸರಯೂ ನದಿ ತೀರದಲ್ಲಿ ಎದ್ದು ನಿಂತವು. ಒಟ್ಟು 1.80 ಲಕ್ಷ ಜನರು ಬಂಧನಕ್ಕೊಳಗಾದರು.

ವಿಜಯರಾಜೇ ಸಿಂಧಿಯಾ, ಉಮಾಭಾರತಿ, ಬಿ.ಎಸ್. ಯಡಿಯೂರಪ್ಪ, ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಹ ಪೊಲೀಸರಿಂದ ಬಂಧಿಸಲ್ಪಟ್ಟರು. ಹಲವು ದಶಕಗಳಿಂದ ಹಿಂದುಗಳ ಆಸ್ಥೆಗೆ ಬಾಧಕವಾಗಿದ್ದ ಆ ಕಟ್ಟಡ ಇನ್ನಿಲ್ಲ ಎಂಬ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ರಾಮಭಕ್ತರು ಖುಷಿಯಿಂದ ಕುಣಿದಾಡಿದರು. ಆದರೆ, ಬಾಬ್ರಿ ಧ್ವಂಸ ಘಟನೆ ಮುಸಲ್ಮಾನರನ್ನು ಕೆರಳಿಸಿತು. ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆಕ್ರೋಶದ ಹೆಸರಲ್ಲಿ ದಂಗೆಗಳು ಭುಗಿಲೆದ್ದವು. ಕೇಂದ್ರ ಸರ್ಕಾರ ಭದ್ರತೆಯನ್ನು ಬಿಗಿಗೊಳಿಸಿದರೂ ಕೋಮು ಸಂಘರ್ಷ ಸಾಂಕ್ರಾಮಿಕ ರೋಗದಂತೆ ದೇಶದಲ್ಲೆಲ್ಲ ಹರಡಿ, 2 ಸಾವಿರ ಜನರು ಬಲಿಯಾದರು. ಮುಂಬೈ, ಸೂರತ್, ಅಹ್ಮದಾಬಾದ್, ಕಾನಪುರ್ ಸೇರಿ ಉತ್ತರ ಪ್ರದೇಶದ ಹಲವು ನಗರಗಳು ದಂಗೆಗೆ ಬೆಂದು ಹೋದವು. ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಹಿಂದು ವಿರೋಧಿ ದಂಗೆಗಳು ಭುಗಿಲೆದ್ದು ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಹಿಂದು ಮಂದಿರಗಳನ್ನು ಕೆಡವಲಾಯಿತು.

ಉತ್ತರ ಪ್ರದೇಶದಲ್ಲಿ ಡಿಸೆಂಬರ್ ಆರರಂದೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಡಿ.16ರಂದು ವಿಧಾನಸಭೆ ವಿಸರ್ಜಿಸಲಾಯಿತು. ಸಕಾರಣವಿಲ್ಲದೆ ಮಧ್ಯಪ್ರದೇಶದ ಸುಂದರ್‌ಲಾಲ ಪಟ್ವಾ, ರಾಜಸ್ಥಾನದ ಭೈರೋಸಿಂಗ್ ಶೇಖಾವತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಡಾ.ಶಾಂತಾಕುಮಾರ ಸರ್ಕಾರಗಳನ್ನು ವಜಾಗೊಳಿಸಲಾಯಿತು. ಆದರೆ, ಕೇಂದ್ರ ಸರ್ಕಾರದ ಪ್ರಜಾತಂತ್ರ ವಿರೋಧಿ ನಡೆಯನ್ನು ಯಾರೂ ಖಂಡಿಸಲಿಲ್ಲ.

ರಾಮ ಜನ್ಮಭೂಮಿಗಾಗಿ ಕರ್ನಾಟಕದ ಕೊಡುಗೆ

1960ರಿಂದಲೂ ರಾಜ್ಯದಲ್ಲಿ ಹೋರಾಟ
ಪೇಜಾವರ ಶ್ರೀಗಳು, ವೀರೇಂದ್ರ ಹೆಗ್ಗಡೆ, ಶ್ರೀ ಶ್ರೀ ರವಿಶಂಕರ್ ಗುರೂಜಿ ಸೇರಿ ಅನೇಕ ಸಂತರ ಕೊಡುಗೆ
ಕಾರ್ಯಕರ್ತರ ಪಡೆ ಕಟ್ಟಿದ್ದು ಜಯನಗರದ ವೈ.ಕೆ.ರಾಘವೇಂದ್ರರಾವ್
ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕಲ್ಲಡ್ಕ ಪ್ರಭಾಕರ ಭಟ್, ವಿ.ನಾಗರಾಜ್ ಕೊಡುಗೆಯೂ ಅಪಾರ
1990ರಲ್ಲಿ ಅಯೋಧ್ಯೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿ.ಎಸ್.ಯಡಿಯೂರಪ್ಪ
ರಾಜ್ಯದಲ್ಲಿ ಸಂಗ್ರಹವಾಗಿದ್ದು 51 ಲಕ್ಷ ರೂ., 8 ಲೋಡ್ ಶಿಲೆಗಳು
ಬೀದರ್ ಜಿಲ್ಲೆಯ ಹುಮ್ನಾಬಾದ್‌ಗೆ ಬಂದಿತ್ತು ಅಡ್ವಾಣಿ ರಥಯಾತ್ರೆ
ಬೆಳಗಾವಿಗೂ ಬಂದಿತ್ತು ಅಡ್ವಾಣಿ ರಥಯಾತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net