

ಉಡುಪಿ: ಅಯೋಧ್ಯೆಯಲ್ಲಿನ ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಅಂತರ ಕಾಯ್ದುಕೊಂಡಿಲ್ಲ. ಬಿಜೆಪಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ, ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯವಾಗುತ್ತದೆ. ಚುನಾವಣೆ ಬಂದಾಗ ಬಿಜೆಪಿಗೆ ಧರ್ಮ, ಮಸೀದಿ, ಪಾಕಿಸ್ತಾನ ನೆನಪಾಗುತ್ತದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಮಂಗಳವಾರ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮಾತನಾಡಿದರು.
ನಾನು ಕೂಡ ರಾಮ ಮತ್ತು ಆಂಜನೇಯನ ಭಕ್ತ. ಕಿಷ್ಕಿಂದ ಜಿಲ್ಲೆಯವನಾಗಿದ್ದು, ಪ್ರತಿ ವರ್ಷ ಆಂಜನೇಯ ಮಾಲೆ ಹಾಕುತ್ತೇನೆ
. ಭಕ್ತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಆಂಜನೇಯನ ಮಾಲೆ ಹಾಕುತ್ತೇನೆ. ಆದರೆ ಬಿಜೆಪಿ ರಾಮನನ್ನು ರಾಜಕೀಕರಣ ಮಾಡುತ್ತಿದೆ. ಮತ್ತೊಬ್ಬರ ಹೆಗಲಲ್ಲಿ ಬಂದೂಕು ಇಟ್ಟು 2014 ರಿಂದ ಬಿಜೆಪಿ ದೇಶ ಆಳಿದೆ. ಕರ್ನಾಟಕದಲ್ಲಿ ಆದ ಪರಿಸ್ಥಿತಿಯೇ ದೇಶದಲ್ಲೂ ಬಿಜೆಪಿಗೆ ಬರಲಿದೆ ಎಂದರು.
ನಿಗಮ ಮಂಡಳಿ ನೇಮಕ ವಿಳಂಬ
ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಧಿಕಾರ ಕೊಡುವಾಗ ಸಮನಾಗಿ ಜಿಲ್ಲಾವಾರು ಹಂಚಬೇಕಾಗುತ್ತದೆ. ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದು, ಶೀಘ್ರ ನೇಮಕ ಮಾಡುತ್ತಾರೆ ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ವಿಚಾರ
ಹೆಚ್ಚಿನ ಅನುದಾನ ಬರುವ ಸಲುವಾಗಿಯೇ ಶಾಸ್ತ್ರೀಯ ಸ್ಥಾನಮಾನ ನೀಡಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಇದರ ಲಾಭ ಪಡೆಯಲಾಗಿದೆ. ಆದರೆ ನಮ್ಮ ರಾಜ್ಯದ ಪರವಾಗಿ ಸಂಸದರು ಮೋದಿ ಅವರಿಗೆ ಒಂದು ಪತ್ರ ಬರೆದಿಲ್ಲ, ಈ ತಿಂಗಳ ಅಂತಕ್ಕೆ ನಾನು ದೆಹಲಿಗೆ ಹೋಗಲಿದ್ದು, ಕೇಂದ್ರ ಸಂಸ್ಕೃತಿ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇನೆ ಎಂದರು.
ಎರಡನೇ ರಾಜ್ಯ ಯಕ್ಷಗಾನ ಸಮ್ಮೇಳನ ವಿಚಾರ
ಅಕಾಡೆಮಿ ಅಧ್ಯಕ್ಷರು, ಸದಸ್ಯರು ನೇಮಕ ಕುರಿತು ಈಗಾಗಲೇ ಎರಡು ಸುತ್ತಿನ ಮಾತುಕತೆಯಾಗಿದ್ದು, ಆದಷ್ಟು ಬೇಗ ಅಕಾಡೆಮಿ ನೇಮಕವಾಗಲಿದೆ. ಜವಾಬ್ದಾರಿಯೂ ಹಂಚಿಕೆಯಾಗಲಿದೆ. ಅಕಾಡೆಮಿಗಳು ಏನೇನು ಕೆಲಸ ಮಾಡಬೇಕು, ಅದನ್ನು ಮಾಡುತ್ತಿವೆ. ಸದ್ಯ ಅಕಾಡೆಮಿಗಳಿಗೆ ನಾನೇ ಅಧ್ಯಕ್ಷನಾಗಿದ್ದು, ಬೇಗ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕವಾಗುತ್ತದೆ ಎಂದರು.
*ಕನ್ನಡ ಸಂಸ್ಕೃತಿ ಇಲಾಖೆಗೆ ಅನುದಾನದ ಕೊರತೆ ವಿಚಾರ*
ಪಕ್ಷವನ್ನು ನೋಡಿಕೊಂಡು ಅನುದಾನ ಹಂಚಿಕೆ ಮಾಡುತ್ತಿಲ್ಲ. ಆ ರೀತಿ ಮಾಡುವುದು ಬಿಜೆಪಿ ಮಾತ್ರ, ನಾವೆಲ್ಲರನ್ನು ಸಮನಾಗಿ ಕಾಣುತ್ತೇವೆ ಸಮಪಾಲು, ಸಮ ಬಾಳು ಸಿದ್ದಾಂತವನ್ನು ನಂಬಿದ್ದೇನೆ. ತಾರತಮ್ಯ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಜಿಲ್ಲೆಯಿಂದ ಪ್ರಪೋಸಲ್ ಬಂದದ್ದಕ್ಕೆ ಹಣ ನೀಡುತ್ತದೆ. ಈ ಬಾರಿ ಕನ್ನಡ ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಕೇಳಿದ್ದು, ಮುಖ್ಯಮಂತ್ರಿಗಳಿಗೆ 40 ರಿಂದ 50 ಕೋಟಿ ಬೇಕು ಎಂದು ಮನವಿ ಮಾಡಿದ್ದೇನೆ. ನಮ್ಮಲ್ಲಿ ಅನುದಾನದ ಕೊರತೆ ಇಲ್ಲ, ಬಿಜೆಪಿಗೆ ಮಾತ್ರ ಕೊರತೆ ಕಾಣುತ್ತದೆ ಎಂದರು.