

ಬೂದಿಕೋಟೆ: 20 ವರ್ಷಗಳಿಂದ ರಾಮನ ಜಪ ಮಾಡುತ್ತ, ಶ್ರೀರಾಮನನ್ನೇ ಆರಾಧಿಸುತ್ತಿರುವ ಮುಸ್ಲಿಂ ಭಕ್ತ ಶ್ರೀರಾಮ ನಾಮವನ್ನು 1 ಕೋಟಿ ಬಾರಿ ಬರೆಯುವ ಮೂಲಕ ರಾಮನ ಮೇಲಿನ ಭಕ್ತಿ ವ್ಯಕ್ತಪಡಿಸಿದ್ದಾರೆ.
ಕಲಿಯುಗದ ಮಹಾಪುರುಷ ಶ್ರೀರಾಮನ ಮೇಲೆ ಅಪಾರ ಭಕ್ತಿ ಹೊಂದಿರುವ ಪಾಚಾಸಾಬಿ ಎಂಬುವವರು ಎಲ್ಲ ಜಾತಿ ಒಂದೇ ಎಂಬ ಭಾವನೆಯಿಂದ ರಾಮನ ಪರಮ ಭಕ್ತರಾಗಿದ್ದಾರೆ. ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಪಾಚಾಸಾಬಿ ಪಂಡಿತ ಪಾಚಾಸಾಬಿ ಎಂದೇ ಚಿರಪರಿಚಿತರು. ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮೈಸೂರು ಮಹಾರಾಜರ ಕಾಲದಲ್ಲಿ ಕೋಲಾರ ಜಿಲ್ಲೆಯ ಜಕ್ಕರಸಕುಪ್ಪ, ರಾಮನಗರ ಜಿಲ್ಲೆಯ ಅಂಚೆಕೆಂಪನದೊಡ್ಡಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಪಾಧ್ಯಾಯರಾಗಿ ನಂತರ ಮುಖ್ಯಶಿಕ್ಷಕರಾಗಿ 26 ವರ್ಷ ಸೇವೆ ಸಲ್ಲಿಸಿದ್ದಾರೆ. ಸೇವೆಯಲ್ಲಿದ್ದಾಗಲೆ ರಜೆ ಹಾಕಿ ಮನೆ ಮಂದಿ ಬಿಟ್ಟು ದೇಶಾಂತರ ಹೊರಟು 20 ವರ್ಷ ಸಾಧು ಸಂತರ ಜತೆ ದೇಶ ಸುತ್ತಾಡಿ ಇದೀಗ ರಾಮನ ಜಪದಲ್ಲಿ ತಲ್ಲೀನರಾಗಿದ್ದಾರೆ.
1 ಕೋಟಿ ರಾಮನಾಮ: ದೇಶ ಪರ್ಯಟನೆ ಸಂದರ್ಭದಲ್ಲಿ ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ರಾಮನ ದರ್ಶನ ಪಡೆದು ಹೊರಬರುತ್ತಿದ್ದಾಗ ಭಕ್ತನೊಬ್ಬ ರಾಮನಾಮ ಬರೆಯುತ್ತಿದ್ದರು. ಅದನ್ನು ಗಮನಿಸಿ, ತಾವೂ ರಾಮಕೋಟಿ ಬರೆಯಲು ಸಂಕಲ್ಪ ಮಾಡಿ ರಾಮನಾಮ ಬರೆಯಲು ಆರಂಭಿಸಿದರು. ಸುಮಾರು 20 ವರ್ಷಗಳಿಂದ ಬರೆಯುತ್ತಾ ಬಂದಿದ್ದು, 2020ರ ಆಗಸ್ಟ್ ಅಂತ್ಯಕ್ಕೆ 1 ಕೋಟಿ ರಾಮನಾಮ ಬರೆದಿದ್ದಾರೆ.
ಮಹಾ ಗ್ರಂಥಗಳು ಕರಗತ: ಪಾಚಾಸಾಬಿ ದೇಶಾದ್ಯಂತ ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ, ಬೈಬಲ್ ಮತ್ತು ಖುರಾನ್ ಓದಿಕೊಂಡಿದ್ದಾರೆ. ಸ್ವಗ್ರಾಮಕ್ಕೆ ಹಿಂತಿರುಗಿದ ನಂತರ ನಿತ್ಯ ರಾಮಸ್ಮರಣೆ ಮಾಡುತ್ತ ತಾಮ್ರದ ತಗಡು ಹಾಗೂ ಪುಸ್ತಕಗಳಲ್ಲಿ ರಾಮನಾಮ ಬರೆಯುವುದನ್ನು ಮುಂದುವರಿಸಿದರು.
ರಾಮನಾಮಕ್ಕೆ ವಿರೋಧ: 20 ವರ್ಷದ ನಂತರ ಗ್ರಾಮಕ್ಕೆ ಹಿಂದಿರುಗಿದಾಗ ಸತ್ತೇ ಹೋಗಿದ್ದ ಎಂದು ಭಾವಿಸಿದ್ದ ಕುಟುಂಬಸ್ಥರು ಅವರ ನಡವಳಿಕೆ ಗಮನಿಸಿ ಆಕ್ಷೇಪಿಸಿದರು. ತಮ್ಮದೇ ಧರ್ಮದ ಶಿಶುನಾಳ ಷರೀರ ಹಾಗೂ ಕಬೀರರ ಕಥೆಗಳನ್ನು ಹೇಳಿ ವಿರೋಧಿಸಿದವರನ್ನು ಪರಿವರ್ತನೆಗೊಳಿಸಿದರು.
ರಾಮನ ಕೃಪಾಕಟಾಕ್ಷ: ಶ್ರೀರಾಮನ ಸ್ಮರಣೆಯಿಂದ 97 ವರ್ಷವಾದರೂ ಎರಡೂ ಕಣ್ಣು ಸ್ವಷ್ಟವಾಗಿ ಕಾಣಿಸುತ್ತಿವೆ. ಕಿವಿ ಚೆನ್ನಾಗಿ ಕೇಳಿಸುತ್ತಿದೆ. ಯಾರ ಸಹಾಯವಿಲ್ಲದೆ ಈಗಲೂ ಮಸೀದಿಗೆ ಹೋಗಿ ನಮಾಜ್ ಮಾಡುತ್ತೇನೆ. ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡುತ್ತೇನೆ. ರಾಮಕೋಟಿ ಭಜನೆಯಲ್ಲಿ ಭಾಗವಹಿಸುತ್ತೇನೆ ಎನ್ನುತ್ತಾರೆ ಪಂಡಿತ ಪಾಚಾಸಾಬಿ.
ರಾಮನಾಮವನ್ನು ಕೋಟಿ ಸಾರಿ ಬರೆದಿದ್ದೇನೆ. ಆದರೆ ಅವುಗಳನ್ನು ನನ್ನ ಮನೆಯಲ್ಲಿ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ರಾಮಕೋಟಿಯನ್ನು ಅಯೋಧ್ಯೆ ಅಥವಾ ಭದ್ರಾಚಲಂ ದೇವಸ್ಥಾನಕ್ಕೆ ತಲುಪಿಸಬೇಕು ಎನ್ನುವುದು ನನ್ನ ಬಹು ವರ್ಷಗಳ ಬಯಕೆ. ಇದಕ್ಕೆ ಯಾರಾದರೂ ಸಹಾಯ ಮಾಡಿದರೆ ನಾನೇ ಹೋಗಿ ರಾಮಕೋಟಿಯ ಭಂಡಾರವನ್ನು ರಾಮನ ಪಾದಕ್ಕೆ ಸಮರ್ಪಿಸುವೆ. ಪಾಚಾಸಾಬಿ, ರಾಮಭಕ್ತ