ಶ್ರೀರಾಮ ಭಾರತೀಯ ಸಂಸ್ಕೃತಿಯ ಪ್ರತೀಕ

IMG-20231214-WA0194
Published on

ಆಲೂರು : ಶ್ರೀರಾಮ ಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಯೋಧ್ಯೆಯ ರಾಮಮಂದಿರದಲ್ಲಿ ಜ. 22ರಂದು ರಾಮನ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು ಆ ಪ್ರಯುಕ್ತ ಅಯೋಧ್ಯೆಯಿಂದ ಬಂದ ರಾಮನ ಭಾವಚಿತ್ರ, ಆಹ್ವಾನ ಪತ್ರಿಕೆ ಹಾಗೂ ಮಂತ್ರಾಕ್ಷತೆಗೆ ಗುರುವಾರ ಪಟ್ಟಣದ ವೀರಶೈವ ಕಲ್ಯಾಣ ಮಂಟಪದ ಸಮೀಪ ಹರ್ಷೋದ್ಘಾರದ ಮೂಲಕ ಸ್ವಾಗತಿಸಿ ಮಾತನಾಡಿದರು. ಶತಮಾನಗಳ ಕಾಲ ಇಡೀ ದೇಶ ಕಾದು ಕುಳಿತಿದ್ದ ಮಹತ್ವದ ಗಳಿಗೆ ಸನ್ನಿಹಿತವಾಗುವ ಕಾಲ ಬಂದಿದೆ. ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಸಂತಸದ ವಿಚಾರ. ಇದನ್ನು ದೇಶದ ಎಲ್ಲರೂ ಮುಕ್ತವಾಗಿ ಗೌರವಿಸಬೇಕು ಎಂದರು.
ಶ್ರೀರಾಮ ಭಗವಂತನ ಅವತಾರವೆಂದೇ ಭಾರತೀಯರ ನಂಬಿಕೆ. ಅಯೋಧ್ಯೆ ನಮ್ಮ ದೇಶದ ಪ್ರಮುಖ ಶ್ರದ್ಧಾ ಕೇಂದ್ರ. ಮರ್ಯಾದಾ ಪುರುಷೋತ್ತಮನ ನೆಲೆ. ರಾಮನ ವ್ಯಕ್ತಿತ್ವ ಜನಮಾನಸದಲ್ಲಿ ಒಂದು ಮಾದರಿಯಾಗಿ ನೆಲೆಯಾಗಿದೆ. ಇದಕ್ಕೆ ಗೌರವ ತೋರಲು ಒಂದು ಭವ್ಯ ವೇದಿಕೆ ಸಿದ್ಧವಾಗಿದೆ ಎಂದರು.
ರಾಮ ಮಂದಿರ ಜನ್ಮಭೂಮಿ ಅಯೋಧ್ಯ ಟ್ರಸ್ಟ್ ತಾಲೂಕು ಸಂಚಾಲಕ ನರೇಶ ಮಾತನಾಡಿ, ಭಾರತೀಯರ ಆದರ್ಶ ಪುರುಷ ರಾಮನ ಮಂದಿರ ನಿರ್ಮಾಣದ ಕನಸು ಈಗ ನನಸಾಗುತ್ತಿದೆ. ಮಂದಿರದ ನಿರ್ಮಾಣ ಕಾಮಗಾರಿ ನಿರ್ವಿಘ್ನವಾಗಿ ನಡೆಯಬೇಕು. ಮೂರ್ತಿ ಪ್ರತಿಷ್ಠಾಪನೆಗೆ ದೇಶದ ಎಲ್ಲ ಭಾಗದ ಜನರೂ ಸಾಕ್ಷಿಯಾಗಬೇಕು ಎಂಬ ಹಿನ್ನೆಲೆಯಲ್ಲಿ ಮಂತ್ರಾಕ್ಷತೆ ಮತ್ತು ಆಮಂತ್ರಣವನ್ನು ತಾಲೂಕಿನ ಪ್ರತಿಯೊಂದು ಮನೆಗೂ ತಲುಪಿಸುತ್ತೇವೆ ಎಂದರು.
ಹಸ್ತಾಂತರ: ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಂಘಟನೆ ಪ್ರಮುಖರಿಗೆ ಪವಿತ್ರ ಮಂತ್ರಾಕ್ಷತೆ ಹಸ್ತಾಂತರ ಮಾಡಿದರು. ತಾಲೂಕು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಮಂಜೇಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಹರೀಶ, ರಾಮ ಮಂದಿರ ಜೀರ್ಣೋದ್ಧಾರ ಸಮಿತಿ ತಾಲೂಕು ಅಧ್ಯಕ್ಷ ಉಮೇಶ, ಬಿಜೆಪಿ ಮುಖಂಡರಾದ ಹೇಮಂತ, ತಟ್ಟೆಗದ್ದೆ ನಾಗರಾಜ್, ಕರಸೇವಕರಾದ ಕಾಂತರಾಜು, ರಮೇಶ್, ಲಕ್ಷ್ಮಣ, ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net