

ಶಿರಸಿ: ಜನರಲ್ಲಿ ನೇತ್ರದಾನದ ಕುರಿತು ಅರಿವು ಮೂಡಿಸಲು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಗರದಲ್ಲಿ ಇತ್ತೀಚೆಗೆ ಜಾಥಾ ನಡೆಸಲಾಯಿತು.
ಕಣ್ಣಿನ ಆರೋಗ್ಯದ ಬಗ್ಗೆ ಅವಶ್ಯಕ ಮಾಹಿತಿ ಕುರಿತಾದ ಕರಪತ್ರಗಳನ್ನು ವಿತರಿಸಲಾಯಿತು. ಬಳಿಕ ಲಯನ್ಸ್ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ದೃಷ್ಟಿಯ ಸುರಕ್ಷೆಯ ಕುರಿತು ಡಾ. ಸಮಂತ ಕೋಲ್ಕತ್ತಾ ಮಾಹಿತಿ ನೀಡಿದರು. ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ಜರುಗಿದ ಗಣೇಶ ನೇತ್ರಾಲಯದ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ. ಸಮಂತರವರು ದೃಷ್ಟಿಯ ಸುರಕ್ಷೆ ಮತ್ತು ನೇತ್ರದಾನದ ಕುರಿತು ತರಬೇತಿ ನೀಡಿದರು.
ಅಕ್ವಾಯಿನ್ ದೃಷ್ಟಿರಥ ಯಾತ್ರಾ ಕೋಲ್ಕತ್ತಾ, ಗಣೇಶ ನೇತ್ರಾಲಯ, ಲಯನ್ಸ್ ನಯನ ನೇತ್ರ ಭಂಡಾರ, ರೋಟರಿ ಕ್ಲಬ್ ಶಿರಸಿ, ಇನ್ನರ್ ವೀಲ್ ಕ್ಲಬ್ ಶಿರಸಿ, ಭಾರತೀಯ ವೈದ್ಯಕೀಯ ಸಂಘ, ಸ್ಕೊಡ್‌ವೆಸ್ ಸಂಸ್ಥೆ, ಎಂ.ಇ.ಎಸ್. ನರ್ಸಿಂಗ್ ಕಾಲೇಜ್ ಆಶ್ರಯದಲ್ಲಿ ಜಾಥಾ ಏರ್ಪಡಿಸಲಾಗಿತ್ತು.