ರಕ್ತದಾನಮಾಡಿ ಮತ್ತೊಂದು ಜೀವ ಉಳಿಸಿ, ಸಚಿವ ಸುಧಾಕರ್ ಕರೆ, ರಕ್ತದಾನ ಶಿಬಿರದಲ್ಲಿ ಪ್ರಮಾಣಪತ್ರ ವಿತರಣೆ

13 Dhl 1
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ರಕ್ತ ಅಮೃತವಿದ್ದಂತೆ ರಕ್ತದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವ ನೀಡುವ ಕೆಲಸವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.


ಪಟ್ಟಣದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಬಿಜೆಪಿ ಯುವಮೊರ್ಚಾ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರೂ ರಕ್ತದಾನದ ಜತೆಗೆ ಅಂಗಾಂಗ ದಾನಕ್ಕೂ ಮುಂದಾಗಬೇಕು. ಅಂಗಾಂಗದಾನ ಶ್ರೇಷ್ಠವಾದ ಕೆಲಸವಾಗಿದ್ದು, ಸಾವಿನ ನಂತರವೂ ಅನೇಕರಿಗೆ ಬದುಕು ಕಟ್ಟಿಕೊಡುವ ಕೆಲಸವಾಗಲಿದೆ ಎಂದರು.

ಕಪ್ಪುಪಟ್ಟಿ ಕೈ ಬಿಡಿ ಮಾತನಾಡೋಣ: ಚನ್ನರಾಯಪಟ್ಟಣ ಭೂಸ್ವಾದೀನ ಹೋರಾಟಗಾರರು ಮತ್ತು ರೈತರನ್ನು ಕರೆದು ಮಾತನಾಡುತ್ತೇನೆ. ಸರ್ಕಾರ ಜನಪರವಾಗಿದ್ದು, ಯಾವುದೇ ಅನ್ಯಾಯವಾಗುವುದಿಲ್ಲ. ಏನೆ ಸಮಸ್ಯೆ ಇದ್ದರೂ ಮಾತುಕತೆಯೊಂದಿಗೆ ತೀರ್ಮಾನ ತೆಗೆದುಕೊಳ್ಳಲಿ. ಅಮೃತಮಹೋತ್ಸವದ ದಿನ ಕಪ್ಪುಪಟ್ಟಿ ಧರಿಸುವುದರಿಂದ ಶೋಭೆ ತರುವುದಿಲ್ಲ. ದೇಶದ ಗೌರವ 75ನೇ ವರ್ಷದ ಉತ್ಸವವನ್ನು ಮಾಡುತ್ತಿದ್ದೇವೆ. ತಾಯಿಯ ಉತ್ಸವದ ದಿನ ಕಪ್ಪುಪಟ್ಟಿ ಧರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಸಚಿವರು ಪ್ರಶ್ನಿಸಿದರು.

ಬಿಜೆಪಿ ಟೌನ್ ಅಧ್ಯಕ್ಷ ಸಂದೀಪ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ನೆನಪಿಗಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಿದ್ದಾರೆ. ಶಿಬಿರದಲ್ಲಿ ಒಟ್ಟು 116 ಯುನಿಟ್ ರಕ್ತ ಸಂಗ್ರಹವಾಗಿದೆ ಎಂದರು.


ಬಯಾಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್, ತಾಲೂಕು ಅಧ್ಯಕ್ಷ ಸುಂದರೇಶ್, ಉಪಾಧ್ಯಕ್ಷೆ ಆರ್.ಪುನೀತಾ, ಪ್ರಧಾನ ಕಾರ್ಯದರ್ಶಿ ನಿಲೇರಿ ಮಂಜುನಾಥ್, ಬಿಜೆಪಿ ಟೌನ್ ಪ್ರಧಾನ ಕಾರ್ಯದರ್ಶಿ ಭರತ್, ಮುನಿರಾಜು, ಉಪಾಧ್ಯಕ್ಷ ಮುನಿಕೃಷ್ಣ, ಪುರಸಭೆ ಸದಸ್ಯ ಬಾಂಬೇ ನಾರಾಯಣಸ್ವಾಮಿ, ಮಂಜುಳಾ, ದೇಸೂ ನಾಗರಾಜ್, ಶಾಂತಿನಿಕೇತನ್ ಶಾಲೆ ಅಧ್ಯಕ್ಷ ವೈ.ಕೆ.ಚಂದರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net