

ಹುಬ್ಬಳ್ಳಿ : ಉಚಿತ ಶಿಕ್ಷಣ ನೀಡುವ ನೆಪ ಹಾಗೂ ಇನ್ನಿತರ ವಂಚನೆಯಿಂದ ಹಿಂದುಗಳನ್ನು ಮತಾಂತರ ಮಾಡಲಾಗುತ್ತಿದೆ. ಮೋಸದಿಂದ ಹಿಂದು ಸಮಾಜ ಒಡೆಯುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಸಹ ಪ್ರಾಂತ ಕಾರ್ಯವಾಹ ಟಿ. ಪ್ರಸನ್ನ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಬ್ಬಳ್ಳಿ ಮಹಾನಗರ ಘಟಕದಿಂದ ನಗರದ ಗೋಕುಲ ರಸ್ತೆಯ ಗೋಕುಲ ಗಾರ್ಡನ್ನಲ್ಲಿ ಗುರುವಾರ ಆಯೋಜಿಸಿದ್ದ ರಕ್ಷಾಬಂಧನ ಉತ್ಸವದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು.
ಹಿಂದುಗಳಲ್ಲಿ ಕಾಣದ ಒಗ್ಗಟ್ಟನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಹಿಂದುಗಳೆಲ್ಲ ಸಂಘಟಿತರಾಗಬೇಕಿದೆ. ಇದಕ್ಕೆ ರಕ್ಷಾಬಂಧನ ಪ್ರೇರಣೆಯಾಗಬೇಕು. ಪ್ರತಿಯೊಬ್ಬರಲ್ಲೂ ತಮ್ಮತನದ ಹಾಗೂ ಹಿಂದುತ್ವದ ಅರಿವು ಮೂಡಬೇಕು ಎಂದರು.
ರಕ್ಷಣೆ ನಮ್ಮ ಪರಂಪರೆಯಲ್ಲಿ ಬಂದಿದೆ. ಸಹೋದರಿ, ಸಹೋದರತ್ವ ಭಾವನೆ ಹಿಂದು ಪರಂಪರೆಯಲ್ಲಿ ಮೊದಲಿನಿಂದಲೂ ಇದೆ ಎಂದು ಹೇಳಿದರು.
ಅತಿಥಿಯಾಗಿದ್ದ ಉದ್ಯಮಿ ಧಿರೇನ ಠಕ್ಕರ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಸಂಘದ ಶಾಖೆಯಲ್ಲಿ ನಡೆಯುವ ಕಾರ್ಯಕ್ರಮದಿಂದ ಪ್ರೇರಣೆಗೊಂಡು ಎನ್ಸಿಸಿ ಸೇರಿದ್ದಾಗಿ ಸ್ಮರಿಸಿದರು.
ಭಾರತ ವಿಶ್ವಗುರು ಆಗುತ್ತಿರುವುದಕ್ಕೆ ಯುವಕರೇ ಸ್ಪೂರ್ತಿ. ಹಿಂದುತ್ವ ಒಂದು ಸಂಪ್ರದಾಯ. ಇದನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲೆ ಇದೆ ಎಂದರು.
ಸಂಘದ ಸ್ವಯಂ ಸೇವಕರು ಇದೇ ಸಂದರ್ಭದಲ್ಲಿ ಪರಸ್ಪರ ರಾಖಿ ಕಟ್ಟಿಕೊಂಡರು.