ಬಾಂಧವ್ಯ ಬೆಸೆಯುವ ಸಂಕೇತವೇ ರಕ್ಷಾ ಬಂಧನ

IMG-20240817-WA0174
Published on

ಅರಸೀಕೆರೆ : ಸಹೋದರತೆ ಬೆಸೆಯುವ ಬಾಂಧವ್ಯದ ಸಂಕೇತ ರಕ್ಷಾ ಬಂಧನ ಎಂದು ಮಾಜಿ ಸೈನಿಕ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ ಹೇಳಿದರು.


ನಗರದ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಭಾರತೀಯ ಮಹಾಕಾವ್ಯ ಮಹಾಭಾರತದಲ್ಲಿ ರಕ್ಷಾಬಂಧನ ಮಹತ್ವ ಕುರಿತು ಉಲ್ಲೇಖವಿದೆ. ಸಹಸ್ರಾರು ಶತಮಾನಗಳ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಲಾ ಆಡಳಿತ ದಿಟ್ಟ ಹೆಜ್ಜೆ ಯಿಟ್ಟಿದೆ ಎಂದು ಬಣ್ಣಿಸಿದರು.


ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಮಾತನಾಡಿ, ಪ್ರಸಕ್ತ ಆಧುನಿಕ ಭಾರತದಲ್ಲಿ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಹೊರಗಡೆ ಓಡಾಡುವುದು ಸವಾಲಾಗಿದೆ. ಕಾಮಾಂಧರು, ಕ್ರೂರಿಗಳು, ಮತಾಂಧರು ಹೆಚ್ಚಿದ್ದು ಇಂತಹ ದುರುಳರ ವಿರುದ್ಧ ಹೋರಾಟ ನಡೆಸಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ಷಾಬಂಧನದ ಮಹತ್ವವನ್ನು ತಿಳಿಯಬೇಕಿದೆ. ದೇಶದ ನಿವಾಸಿಗಳು ಸಹೋದರತೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಅತ್ಯಾಚಾರ ಅನಾಚಾರ ತೊಲಗಲಿದ ಎಂದರು.


ಶಾಲೆಯ ಪ್ರಾಂಶುಪಾಲರಾದ ಸರೋಜಿನಿ ಬಿ.ಅಂಗೋಲ್ಕರ್ ಮಾತನಾಡಿ, ರಕ್ಷಾ ಬಂಧನ ಅಣ್ಣ, ತಂಗಿಯ ಸಂಬಂಧಕ್ಕೆ ಸೀಮಿತವಾಗಿಲ್ಲ. ಬದಲಾಗಿ ದೇಶದ ಗಡಿಭಾಗದಲ್ಲಿ ದೇಶ ರಕ್ಷಣೆಯನ್ನು ಮಾಡುತ್ತಿರುವ ಪ್ರತಿಯೊಬ್ಬ ಸೈನಿಕನು ಕೂಡ ನಮ್ಮ ಸಹೋದರನೆಂದು ಮಕ್ಕಳಿಗೆ ವಿವರಿಸಿದರು.
ಮಾಜಿ ಸೈನಿಕರಾದ ನಾಗಭೂಷಣ್, ವೆಂಕಟೇಶ್ ಅಯ್ಯಂಗಾರ್, ಮಲ್ಲಿಕಪ್ಪ, ಹರೀಶ್ ಶಿಕ್ಷಕರಾದ ಮಧು, ಶ್ರುತಿ, ಉಷಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net