ರಕ್ಷಾ ಬಂಧನ ಸಂಸ್ಕೃತಿ, ಸನಾತನ ಧರ್ಮದ ಪ್ರತಿಬಿಂಬ

Oplus_131072
Oplus_131072
Published on

ವಿರಾಜಪೇಟೆ: ಪೌರಾಣಿಕ ಹಿನ್ನೆಲೆಯೊಂದಿಗೆ ಆಚರಿಸಲ್ಪಡುವ ರಕ್ಷಾ ಬಂಧನ ಹಬ್ಬ ನಮ್ಮ ಸಂಸ್ಕೃತಿ ಮತ್ತು ಸನಾತನ ಧರ್ಮದ ಪ್ರತಿಬಿಂಬ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕುಟುಂಬ ಸಹ ಪ್ರಭೋದನ್ ಟಿ.ಸಿ.ಚಂದ್ರನ್ ಹೇಳಿದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರಾಜಪೇಟೆ ಶಾಖೆ ವತಿಯಿಂದ ನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಧರ್ಮ ಇರುವವರೆಗೂ ಭವ್ಯ ಭಾರತದ ಸಂಸ್ಕೃತಿ ಜೀವಂತ ಎಂದರು.
ಶ್ರೀ ಕೃಷ್ಣನ ಕೈಗೆ ಗಾಯವಾದ ಸಂಧರ್ಭ ದ್ರೌಪದಿ ತಾನು ಧರಿಸಿದ್ದ ಸೀರೆಯನ್ನು ಹರಿದು ಗಾಯವಾದ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಯಾಗಿ ದ್ರೌಪದಿ ವಸ್ತ್ರಾಪಹರಣ ಸಮಯದಲ್ಲಿ ಶ್ರೀಕೃಷ್ಣ ಸೀರೆಯನ್ನು ಧಾರೆ ಎರೆಯುತ್ತಾನೆ. ಇದು ರಕ್ಷಾ ಬಂಧನದ ಪ್ರತೀಕ. ಭಾರತೀಯ ಭವ್ಯ ಪರಂಪರೆಯ ಸಂಕೇತವಾಗಿರುವ ಸಂಸ್ಕೃತಿ, ಸಾಂಸ್ಕರ ಸರ್ವ ಋತುವಿನಲ್ಲಿಯೂ ಆಚರಣೆಯಲ್ಲಿರಬೇಕು ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶ್ರಾವಣ ಹುಣ್ಣಿಮೆ ದಿನದಂದು ರಕ್ಷಾ ಬಂಧನ ಆಚರಿಸುತ್ತಿದೆ ಎಂದು ವಿವರಿಸಿದರು.


ದೇಶ, ಪರಿಸರ, ಕುಟುಂಬ, ಸಂಸ್ಕೃತಿ ರಕ್ಷಣೆ ಹೀಗೆ ಹಲವು. ಹೀಗೆ ಹಲವು ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ರಕ್ಷಣೆ ಮಾಡಿಕೊಂಡಲ್ಲಿ ಸುಸಂಸ್ಕೃತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಅಖಂಡ ಭಾರತವಾಗಿದ್ದ ಭಾರತ ಪರಕೀಯರ ಆಕ್ರಮಣದಿಂದಾಗಿ ವಿಭಜನೆಗೊಂಡಿತು. ಪರಿಣಾಮ ಆಚಾರ-ವಿಚಾರ, ಸಂಸ್ಕೃತಿಯೂ ನಾಶವಾಯಿತು ಎಂದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಖಂಡ ಹಿಂದು ಸಮಾಜದ ಒಳಿತಿಗಾಗಿ ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ. ಭವ್ಯ ಭಾರತಕ್ಕಾಗಿ ಸಮಾಜದಲ್ಲಿ ಸಾಮರಸ್ಯ ಸಾಧಿಸುವುದು, ಪರಿಸರ ಸಂರಕ್ಷಣೆ, ಸ್ವದೇಶಿ ಬಳಕೆ, ಕುಟುಂಬ ವಾತ್ಸಲ್ಯ ಮತ್ತು ನಾಗರಿಕ ಸಂಹಿತೆ ( ಏಕ ರೂಪ ಕಾನೂನು) ಗಾಗಿ ಹಿಂದುಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.


ಇದಕ್ಕೂ ಮುನ್ನ ಭಗವತ್ ಧ್ವಜಕ್ಕೆ ರಕ್ಷೆ ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಹಿಂದುಗಳಿಗೆ ರಕ್ಷೆ ನೀಡಿ ಬಲಗೈಯಲ್ಲಿ ಧರಿಸಲು ತಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net