

ವಿರಾಜಪೇಟೆ: ಸಮೀಪದ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ರಕ್ಷಾ ಬಂಧನ ಆಚರಿಸಿದರು.
ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸಿಂಧು ಸಂಸ್ಥೆಯಿಂದ ನವದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಪತಿಗಳ ರಕ್ಷಾ ಬಂಧನ ಕಾರ್ಯಕ್ರಮಕ್ಕೆ ರಾಜ್ಯದಿಂದ ರಾಯಚೂರು, ಬೆಳಗಾವಿ, ಕೋಲಾರ ಹಾಗೂ ಕೊಡಗು ಜಿಲ್ಲೆಗಳ ಬುಡಕಟ್ಟು ಸಮುದಾಯದ ವಸತಿ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿ ವರ್ಷ ರಕ್ಷಾಬಂಧನ ಕಾರ್ಯಕ್ರಮ ಆಚರಿಸುವುದು ವೈಶಿಷ್ಟೃವಾಗಿದ್ದು, ಅದರಂತೆ ಈ ವರ್ಷ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳೊಂದಿಗೆ ರಕ್ಷಾಬಂಧನ ಕಾರ್ಯಕ್ರಮ ಆಚರಿಸುವ ಆಶಯ ಹೊಂದಿದ್ದರು. ಅವರ ಕರೆಯ ಮೇರೆಗೆ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಸಂಗೀತ ಶಿಕ್ಷಕಿ ಕೋಮಲ್ ಗುಪ್ತ ನೇತೃತ್ವದಲ್ಲಿ ಆರನೇ ತರಗತಿಯ ಎಲ್.ಎಂ.ಪ್ರತಿಕ್ಷಾ, 7ನೇ ತರಗತಿಯ ಸಿ.ಎಲ್.ಕನ್ನಿಕಾ, 8ನೇ ತರಗತಿಯ ತನ್ವಿ ತಂಗಮ್ಮ, 9ನೇ ತರಗತಿಯ ಎಚ್.ಕೆ.ನೇಹಾ ಮತ್ತು 10ನೇ ತರಗತಿಯ ಕೆ.ಎಂ.ಪ್ರಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಬಳಿಕ ರಾಷ್ಟ್ರಪತಿಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಶಾಲೆಯ ಶಿಕ್ಷಣದ ವಿಧಾನ, ಶೈಲಿ, ಪ್ರಗತಿ, ಮೂಲ ಸೌಕರ್ಯ ಹಾಗೂ ಅಗತ್ಯತೆಗಳ ಕುರಿತು ಚರ್ಚಿಸಿದರು.