

ಶಿವಮೊಗ್ಗ: ಸಹೋದರತ್ವದ ಸಂದೇಶ ಸಾರುವ ರಕ್ಷಾ ಬಂಧನವನ್ನು ಬುಧವಾರ ಜಿಲ್ಲೆಯ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ, ಕಾಲೇಜುಗಳಲ್ಲೂ ಸಂಭ್ರಮ ಮನೆ ಮಾಡಿತ್ತು. ವಿದ್ಯಾರ್ಥಿನಿಯರು ತಮ್ಮ ಸಹಪಾಠಿ ಮಿತ್ರರಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಬೆಸುಗೆಗೆ ನಾಂದಿ ಹಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮನೆಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಮಹಿಳಾ ಉದ್ಯೋಗಿಗಳು ಸಹೋದ್ಯೋಗಿ ಪುರುಷರಿಗೆ ರಾಖಿ ಕಟ್ಟಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ವಿವಿಧ ವಾರ್ಡ್‌ಗಳಿಗೆ ತೆರಳಿ ಹಿತೈಷಿಗಳು, ಪಕ್ಷದ ಕಾರ್ಯಕರ್ತರು, ಹಿರಿಯರು ಹಾಗೂ ಪೌರ ಕಾರ್ಮಿಕರಿಗೆ ರಾಖಿ ಕಟ್ಟಿದರು.
ಸ್ನೇಹ ಸ್ವಾಭಿಮಾನದ ಸಂಕೇತ: ರಕ್ಷಾ ಬಂಧನ ಸ್ನೇಹ, ಸಹಕಾರ, ಸ್ವಾಭಿಮಾನದ ಸಂಕೇತವಾಗಿದೆ. ಸಹೋದರನ ಒಳಿತಿಗೆ ಸಹೋದರಿಯ ಹಾರೈಕೆಯ ಆಶಯ ಇದರಲ್ಲಿ. ಆಶೀರ್ವಾದ ಕೋರಿ ಬರುವ ಭಕ್ತರಿಗೆ ಋಷಿಗಳು ರಕ್ಷಾ ಬಂಧನ ಕಟ್ಟುತ್ತಿದ್ದರು ಎಂದು ಶಿವಮೊಗ್ಗ ರೋಟರಿ ಪೂರ್ವ ಅಧ್ಯಕ್ಷ ಸತೀಶ್‌ಚಂದ್ರ ಹೇಳಿದರು.
ರೋಟರಿ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ತಂತ್ರಜ್ಞಾನ ಮುಂದುವರಿದಂತೆ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಅದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ರಕ್ಷಾ ಬಂಧನದ ಸಂದರ್ಭದಲ್ಲಿ ಪಣ ತೊಡಬೇಕಿದೆ ಎಂದರು.
ರೋಟರಿ ಮಾಜಿ ಸಹಾಯಕ ಗೌರ‌್ನರ್ ಜಿ.ವಿಜಯಕುಮಾರ್ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅವರ ಸಲಹೆ, ಸಹಕಾರ, ಪುರುಷರ ಯಶಸ್ಸಿಗೆ ಕಾರಣವಾಗಿದೆ. ರಾಖಿ ಕಟ್ಟುವುದರಿಂದ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸದ ಜತೆಗೆ ಆತ್ಮ ವಿಶ್ವಾಸ, ಸಹೋದರತ್ವ ಬೆಳೆಯುತ್ತದೆ ಎಂದು ಹೇಳಿದರು.
ರೋಟರಿ ಎಜುಕೇಷನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಚಂದ್ರಶೇಖರಯ್ಯ, ಉಪಾಧ್ಯಕ್ಷ ಡಾ.ಪರಮೇಶ್ವರ್ ಡಿ.ಶಿಗ್ಗಾಂವ್, ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ, ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ನಿರ್ದೇಶಕಿ ಸ್ವಪ್ನಾ ಬದರೀನಾಥ್, ಪ್ರಾಚಾರ್ಯ ಆರ್.ಸೂರ್ಯನಾರಾಯಣ್, ಮುಖ್ಯ ಶಿಕ್ಷಕಿ ಜಯಶೀಲಾಬಾಯಿ ಮುಂತಾದವರಿದ್ದರು.