ಹನೂರಿನಲ್ಲಿ ರಾಜ್ಯೋತ್ಸವ ಮೆರವಣಿಗೆ ವಿಜೃಂಭಣೆ

ಹನೂರಿನಲ್ಲಿ ಜೈ ಭುವನೇಶ್ವರಿಯ ಮೆರವಣಿಗೆಯು ವಿಜೃಂಭಣೆಯಿಂದ ಜರುಗಿತು.
Published on

ಹನೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಅಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದ ಜೈಭುವನೇಶ್ವರಿಯ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.

ಮರವಣಿಗೆಯಲ್ಲಿ ಕನ್ನಡ ಭಾವುಟಗಳು ರಾರಾಜಿಸಿದವು. ಜಯಘೋಷಗಳು ಮೊಳಗಿದವು. ತಮಟೆ ಹಾಗೂ ನಗಾರಿಗಳ ಸದ್ದಿಗೆ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದರು. ಜತೆಗೆ ಟಿಬೆಟಿಯನ್ನರು ಪಾಲ್ಗೊಂಡು ಗಮನ ಸೆಳೆದರು. ಮೆರವಣಿಗೆಯುದ್ದಕ್ಕೂ ಶಾಸಕ ಎಂ.ಆರ್.ಮಂಜುನಾಥ್ ಕಲಾವಿದರನ್ನು ಹುರಿದುಂಬಿಸಿದರು.

ಶಾಸಕ ಎಂ.ಆರ್.ಮಂಜುನಾಥ್ ಅವರ ಸೂಚನೆಯಂತೆ ಪಟ್ಟಣದ ಪ್ರಮುಖ ರಸ್ತೆಯನ್ನು ವಿವಿಧ ವಿದ್ಯುತ್ ದೀಪಗಳಿಂದ ಸಿಂಗರಿಸಲಾಯಿತು. ಬೆಳಗ್ಗೆ 10ರಲ್ಲಿ ಆರಂಭವಾದ ಜೈ ಭುವನೇಶ್ವರಿಯ ಮೆರವಣಿಗೆಯು ಸುಮಾರು 1 ಗಂಟೆಗಳ ಕಾಲ ವಿಜೃಂಭಣೆಯಿಂದ ನಡೆಯಿತು.

ಆರ್‌ಎಂಸಿ ಆವರಣದಲ್ಲಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಟ್ರಾಕ್ಟರ್‌ನಲ್ಲಿ ಅಳವಡಿಸಲಾಗಿದ್ದ ಜೈಭುವನೇಶ್ವರಿ ಭಾವಚಿತ್ರಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಕನ್ನಡಪರ ಸಂಘಟನೆಗಳು, ರೈತರು, ಶಾಲಾ ಮಕ್ಕಳು, ಕನ್ನಾಡಾಭಿಮಾನಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ವಿವಿಧ ಕಲಾ ತಂಡಗಳೊಂದಿಗೆ ಮ.ಬೆಟ್ಟದ ಮುಖ್ಯ ರಸ್ತೆಯ ಮೂಲಕ ಸಾಗಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದವರೆಗೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಅಲ್ಲದೆ ಟಿಬೆಟಿಯನ್ನು ಮೆರವಣಿಗೆಯುದ್ದಕ್ಕೂ ತಮ್ಮ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಇನ್ನು ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆಯಿತು. ಜತೆಗೆ ಜೈಭುವನೇಶ್ವರಿ, ಕಿತ್ತೂರುರಾಣಿ ಚೆನ್ನಮ್ಮ ವೇಷಧಾರಿ ವಿದ್ಯಾರ್ಥಿಗಳು ಎಲ್ಲರ ನೋಡಗರ ಮನ ಸೆಳೆದರು. ಜೂನಿಯರ್ ರಾಜ್‌ಕುಮಾರ್ ಎಂದು ಹೆಸರುವಾಸಿಯಾದ ಪಟ್ಟಣದ ಚಂದ್ರು ಮೆರವಣಿಗೆಯಲ್ಲಿ ನೃತ್ಯ ಪ್ರದರ್ಶಿಸಿ ಎಲ್ಲರನ್ನು ರಂಜಿಸಿದರು. ಈ ಮೂಲಕ ಮೆರವಣಿಗೆಯು ವಿಜೃಂಭಣೆಯಿಂದ ಜರುಗಿತು.

ಕನ್ನಡತನ ಗಟ್ಟಿಗೊಳಿಸುವ ಕೆಲಸವಾಗಲಿ: ಪಟ್ಟಣದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಕನ್ನಡ ಭಾಷೆ 2 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇತರೆ ಭಾಷೆಗಳಿಗೆ ಹೋಲಿಸಿದರೆ ಉತ್ಕೃಷ್ಟತೆಯಿಂದ ಕೂಡಿದ್ದು, ಹೆಗ್ಗಳಿಕೆಯನ್ನು ಗಳಿಸಿದೆ. ಹಾಗಾಗಿ ಸಂಸ್ಕೃತಿ, ನೆಲ, ಜಲ ಹಾಗೂ ಭಾಷೆಯನ್ನು ರಕ್ಷಿಸುವುದರ ಜತೆಗೆ ಕನ್ನಡತನವನ್ನು ಉಳಿಸಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮುಂದಿನ ಪೀಳಿಗೆಗೆ ಕನ್ನಡತನವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕಿದೆ. ಈ ದೆಸೆಯಲ್ಲಿ ಗಡಿ ತಾಲೂಕು ಹನೂರಿನಲ್ಲಿ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಕನ್ನಡದ ಏಳಿಗೆಯ ಬಗ್ಗೆ ಆಚರಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಬೇಕು ಎಂದರು.

ಅಸ್ಮಿತೆ ಮೆರೆಯಲಿ: ಸಾಹಿತಿ ಇಂದ್ವಾಡಿ ಶಿವಣ್ಣ ಮಾತನಾಡಿ, ಕವಿ ಶ್ರೀ ವಿಜಯ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿವರೆಗೂ ರಾಜ್ಯದ ಎಲ್ಲೇಯನ್ನು ವಿವರಿಸಿದ್ದಾರೆ. ವಿಶ್ವದ ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಎಲ್ಲವನ್ನು ಮೈಗೂಡಿಸಿಕೊಂಡಿದೆ. ವಚನ ಸಾಹಿತ್ಯದಲ್ಲಿ ವೈಶಿಷ್ಟ್ಯತೆಯನ್ನು ಹೊಂದಿದೆ. ಹಾಗಾಗಿ ಕನ್ನಡದ ಸಂಸ್ಕೃತಿ, ನೆಲ, ಜಲ ಹಾಗೂ ಭಾಷೆಯನ್ನು ಉಳಿಸಿ ಬೆಳೆಸುದಲ್ಲ, ಬದಲಾಗಿ ಬಳಸಿ ಉಳಿಸುವಂತಾಗಬೇಕು. ಈ ದೆಸೆಯಲ್ಲಿ ಪ್ರತಿಯೊಬ್ಬರಲ್ಲೂ ಕನ್ನಡತನ ಮನದಲ್ಲಿ ಮೂಡಬೇಕು. ಈ ಮೂಲಕ ಅಸ್ಮಿಯತೆಯನ್ನು ಮೆರೆಯಬೇಕು ಎಂದರು.

ಇದಕ್ಕೂ ಮುನ್ನಾ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರೆ ನಾಡ ಧ್ವಜಾರೋಹಣವನ್ನು ಶಾಸಕ ಎಂ.ಆರ್ ಮಂಜುನಾಥ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕ ಪಡೆದ ವಿವಿಧ ಶಾಲೆಯ ಕೀರ್ತಿನಾ, ಸ್ಪಂದನಾ, ಸೌಜನ್ಯಾ, ಮೇಘನಾ ಹಾಗೂ ಸಹನಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪಪಂ ಅಧ್ಯಕ್ಷೆ ಮಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್‌ಕುಮಾರ್, ಸದಸ್ಯರಾದ ಸಂಪತ್‌ಕುಮಾರ್, ಸೋಮಶೇಖರ್, ಸುದೇಶ್, ತಾಪಂ ಇಒ ಉಮೇಶ್, ಬಿಇಒ ಗುರುಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮಣಿ, ಪರಿಶಿಷ್ಟ ವರ್ಗಗಳ ಸಹಾಯಕ ನಿರ್ದೇಶಕ ರಾಜೇಶ್, ಆರ್‌ಐ ಶೇಷಣ್ಣ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಕನ್ನಡಪರ ಸಂಘಟನೆಯ ವಿನೋದ್, ರೈತ ಸಂಘದ ಮಾದಪ್ಪ, ಟಿಬೆಟಿಯನ್ ಕ್ಯಾಂಪ್ ಆಡಳಿತಾಧಿಕಾರಿ ತುಪ್ತೇನ್ ಸಿಂಗ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net