ರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ

web1
ಅಥಣಿ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಸಿದರಾಯ ಭೋಸಗೆ ಮಾತನಾಡಿದರು. ಶ್ರೀಶೈಲ ಗುಡಮೆ, ಮಹಾದೇವ ಬಿರಾದಾರ ಇತರರಿದ್ದರು.
Published on

ಅಥಣಿ: ತಾಲೂಕಿನಾದ್ಯಂತ ನ.1ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅಗತ್ಯ ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಸಿದರಾಯ ಭೋಸಗೆ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಪ್ರಮುಖ ಬೀದಿಗಳನ್ನು ಸ್ವಚ್ಛತೆಗೊಳಿಸಿ ವಿದ್ಯುತ್ ದೀಪಾಲಂಕಾರ ಅಳವಡಿಸಲಾಗುವುದು. ಸ್ತಬ್ಧಚಿತ್ರ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಗಡಿಭಾಗದ ಖಿಳೇಗಾವಿ, ಪಾಂಡೆಗಾವ, ಜಕಾರಟ್ಟಿ, ಮದಭಾವಿ, ಅರಳಟ್ಟಿ, ಜಂಬಿ, ಶಿರೂರ, ಸಂಬರಗಿ ಮತ್ತು ಪಡತರವಾಡಿ ಗ್ರಾಮಗಳಲ್ಲಿ ಕನ್ನಡ ನಾಮಲಕ ಕಡ್ಡಾಯಗೊಳಿಸಿ, ರಾಜ್ಯೋತ್ಸವ ಆಚರಣೆಗೆ ಕ್ರಮ ಕೈಗೊಳ್ಳಬೇಕೆಂಬ ಕನ್ನಡಪರ ಸಂಘಟನೆಗಳ ಮನವಿಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಸಿದರಾಯ ಭೋಸಗೆ, ಶೀಘ್ರವೇ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು. ಗ್ರೇಡ್-2 ತಹಸೀಲ್ದಾರ್ ಶ್ರೀಶೈಲ ಗುಡಮೆ, ಉಪ ತಹಸೀಲ್ದಾರ್ ಮಹಾದೇವ ಬಿರಾದಾರ, ಅಧಿಕಾರಿಗಳಾದ ಬಿ.ಎಸ್.ಯಾದವಾಡ, ವೆಂಕಟೇಶ ಕುಲಕರ್ಣಿ, ರೇಣುಕಾ ಹೊಸಮನಿ, ವಿದ್ಯಾ ಜೋಶಿ, ಎಂ.ಎಂ.ಮಲ್ಲುಖಾನ, ದೇವೇಂದ್ರ ಬಿಸ್ವಾಗರ, ಸಿದ್ದಾರ್ಥ ಸಿಂಗೆ, ಸಂಜೀವ ಕಾಂಬಳೆ, ಆರ್.ಎಸ್.ದೊಡ್ಡನಿಂಗಗೊಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net