

ರಾಯಚೂರು: ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ನಗರದ ನಿವೃತ್ತ ಮುಖ್ಯಗುರು ಹಾಗೂ ಸಾಹಿತಿ ರಾಮಣ್ಣ ಹವಳೆಯನ್ನು ಆಯ್ಕೆ ಮಾಡಲಾಗಿದೆ.
ಮೂಲತಃ ಅವಿಭಜಿತ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ 83 ವರ್ಷದ ರಾಮಣ್ಣ ಹವಳೆ ರಾಯಚೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿ ಉತ್ತಮ ಸೇವೆಗಾಗಿ 1986ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 1990ರಲ್ಲಿ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜೀನರಾಗಿದ್ದರು.
ತಾವು ಸೇವೆ ಸಲ್ಲಿಸಿದ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮುನ್ನೂರುವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜಿಲ್ಲೆಯಲ್ಲಿಯೇ ಮಾದರಿ ಶಾಲೆ ಎನ್ನುವಂತೆ ರೂಪಿಸಿದ್ದರು.
ನಲಿಕಲಿ ಕನ್ನಡ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದು, 1 ರಿಂದ 5ನೇ ತರಗತಿಯ ಹಾಗೂ 10ನೇ ತರಗತಿ ಪಠ್ಯಪುಸ್ತಕಗಳ ರಚನೆಯಲ್ಲಿ ಕೆಲಸ ಮಾಡಿದ್ದಾರೆ. ಜತೆಗೆ ಶಿಕ್ಷಕರ ಮಾರ್ಗದರ್ಶಿ ಕೈಪಿಡಿಯನ್ನು ಹೊರತಂದಿದ್ದು, ಹಲವು ವರ್ಷಗಳ ಕಾಲ ಪಠ್ಯ ರಚನೆ ಭಾಗವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಶಿಕ್ಷಣದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಹೆಚ್ಚಿನ ಕೃಷಿ ಮಾಡಿರುವ ರಾಮಣ್ಣ ಹವಳೆ, ಪ್ರಮುಖವಾಗಿ ಹೈ.ಕ. ವಿಮೋಚನಾ ಹೋರಾಟದ ಮೇಲೆ ಸಂಶೋಧನೆ ನಡೆಸುವ ಮೂಲಕ ಹಲವಾರು ಕೃತಿಗಳನ್ನು ಹೊರತಂದಿದ್ದಾರೆ. ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ಬದುಕನ್ನು ತಮ್ಮ ಕೃತಿಗಳ ಮೂಲಕ ಪರಿಚಯಿಸುವ ಕೆಲಸ ಮಾಡಿದ್ದಾರೆ.
ಸ್ವಾತಂತ್ರ ಹೋರಾಟದಲ್ಲಿ ಗಜೇಂದ್ರಹಡ ಶಿಬಿರ ಗ್ರಂಥಕ್ಕೆ 1997ರಲ್ಲಿ ಗುಲ್ಬರ್ಗ ವಿವಿಯಿಂದ ಸಂಶೋಧನಾ ಪ್ರಶಸ್ತಿ ದೊರೆತಿದ್ದು, ಮುಂಡರಗಿ ನಾಡ ಸ್ವಾತಂತ್ರ ಹೋರಾಟ, ಹೈದರಾಬಾದ ಸಂಸ್ಥಾನ ವಿಮೋಚನೆಯಲ್ಲಿ ರಾಯಚೂರು ಜಿಲ್ಲೆಯ ಹೋರಾಟ 2011ರಲ್ಲಿ ಸಂಶೋಧನಾ ಪ್ರಶಸ್ತಿ ಲಭಿಸಿದೆ.
ಕೊಪ್ಪಳ ನಾಡಿನ ಸ್ವಾತಂತ್ರ ಹೋರಾಟ, ಗದಗ ಜಿಲ್ಲಾ ಸ್ವಾತಂತ್ರ ಹೋರಾಟ, ಸ್ವಾತಂತ್ರ ಸೇನಾನಿ ಪುಂಡಲೀಕಪ್ಪ ಜ್ಞಾನಮೋಠೆ, ಹೈದರಾಬಾದ ಕರ್ನಾಟಕದಲ್ಲಿ ಸ್ವಾತಂತ್ರ ಹೋರಾಟ, ಪಂ.ತಾರಾನಾಥರ ಜೀವನ ಚರಿತ್ರ ಇವರ ಪ್ರಮುಖ ಕೃತಿಗಳಾಗಿವೆ.
ಶಿಕ್ಷಣ ಸೇವೆಗಾಗಿ 1992ರಲ್ಲಿ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ, ಜಿಲ್ಲಾಡಳಿತದ ಪ್ರಶಸ್ತಿ ಲಭಿಸಿದ್ದು, 2011ರಲ್ಲಿ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಜತೆಗೆ ರಾಯಚೂರು ಜಿಲ್ಲಾ ಪಂಚಾಯತ್ ವಾರ್ತೆ ಮಾಸಿಕ ಪತ್ರಿಕೆ ಸಂಪಾದಕ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದರು.