ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ರಾಜ್ಯೋತ್ಸವ ಪ್ರಶಸ್ತಿ

sri-ramakrishna-ashrama-mysore
Published on

ಮೈಸೂರು: ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಜತೆಗೆ ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಹಾಗೂ ಮಾಜಿ ಎಂಎಲ್ಸಿ ಡಿ.ಮಾದೇಗೌಡ ಅವರಿಗೂ ಪ್ರಶಸ್ತಿ ಸಿಕ್ಕಿದೆ.

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ ಸ್ವಾಮಿ ಬ್ರಹ್ಮಾನಂದರ ದೀಕ್ಷಾ ಶಿಷ್ಯರಾದ ಸ್ವಾಮಿ ಸಿದ್ದೇಶ್ವರಾನಂದ ಅವರಿಂದ 1925ರ ಜೂನ್ 11ರಂದು ಸ್ಥಾಪಿಸಲಾಯಿತು. 1932ರಲ್ಲಿ ಮೈಸೂರು ಮಹಾರಾಜರು ಒಂದು ಸಣ್ಣ ಕಟ್ಟಡ ನಿರ್ಮಿಸಲು ಮತ್ತು ಸ್ವಾಮಿಗಳಿಗೆ ವೇದಾಂತ ಅಧ್ಯಯನ ವೃತ್ತವನ್ನು ನಡೆಸಲು ಸಹಾಯ ಮಾಡಿದರು. ರಾಮಕೃಷ್ಣ ಆಶ್ರಮದ ವಿವಿಧ ಕೇಂದ್ರಗಳಿಂದ ಬರುವ ಸನ್ಯಾಸಿಗಳು ಮತ್ತು ಬ್ರಹ್ಮಚಾರಿಗಳಿಗೆ ವಿದ್ವಾಂಸರು ಇಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಖ್ಯಾತ ಸಾಹಿತಿ ಕುವೆಂಪು ವಿದ್ಯಾರ್ಥಿ ದಿನಗಳಲ್ಲಿ ಈ ಆಶ್ರಮದಲ್ಲಿ ಆರಂಭಿಕ ತರಬೇತಿ ಮತ್ತು ಶ್ರೀರಾಮಕೃಷ್ಣರ ನೇರ ಶಿಷ್ಯರಾದ ಸ್ವಾಮಿ ಶಿವಾನಂದರಿಂದ ಆಧ್ಯಾತ್ಮಿಕ ದೀಕ್ಷೆ ಪಡೆದಿದ್ದರು. ಅಧ್ಯಾತ್ಮದ ಜತೆಗೆ ಆಶ್ರಮ ಶೈಕ್ಷಣಿಕ ಕ್ರಾಂತಿಯನ್ನೂ ಮಾಡುತ್ತಿದೆ. ಬಡವರಿಗೆ ನಾನಾ ರೀತಿಯ ಸಹಾಯಹಸ್ತ ಚಾಚುತ್ತಿದೆ.

ಡಿ.ಮಾದೇಗೌಡ: ಮೈಸೂರಿನ ಕುಂಬಾರಕೊಪ್ಪಲು ನಿವಾಸಿಯಾಗಿದ್ದು, ‘ಮನೆ ಮಾದೇಗೌಡ’ ಎಂದೇ ಖ್ಯಾತರಾಗಿದ್ದಾರೆ. ಸಿಐಟಿಬಿ ಅಧ್ಯಕ್ಷರಾಗಿದ್ದಾಗ ಸಾರ್ವಜನಿಕರಿಗೆ ಸಾವಿರಾರು ಮನೆಗಳನ್ನು ನಿರ್ಮಿಸಿಕೊಟ್ಟಿರುವ ಹೆಗ್ಗಳಿಗೆ ಇವರದು. ಆರಂಭದಲ್ಲಿ ಜನತಾ ಪರಿವಾರದಲ್ಲಿ ಇದ್ದ ಇವರು, ಬಳಿಕ ಕಾಂಗ್ರೆಸ್ ಪಕ್ಷದಲ್ಲಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರೊ.ಎಂ.ಕೃಷ್ಣೇಗೌಡ: ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ. ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಸುದೀರ್ಘ ಕಾಲ ಅಧ್ಯಾಪಕ ವೃತ್ತಿ ನಡೆಸಿ, ಪ್ರಾಂಶುಪಾಲರಾಗಿ ಸೇವೆಯಿಂದ ನಿವೃತ್ತರಾಗಿದ್ದಾರೆ. ವಾಗ್ಮಿ ಹಾಗೂ ಭಾಷಣಕಾರರಾಗಿ ಜನಪ್ರಿಯತೆ ಪಡೆದಿದ್ದಾರೆ. ಅಮೆರಿಕದ ಅಕ್ಕ ಸಮ್ಮೇಳನ ಸೇರಿದಂತೆ ಪ್ರಪಂಚದಾದ್ಯಂತ ಕನ್ನಡದ ಕಂಪು ಹರಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿದ್ದಾರೆ. ‘ವಿಜಯವಾಣಿ’ ಪತ್ರಿಕೆಯ ಅಂಕಣಕಾರರಾಗಿಯೂ ಅನೇಕ ಲೇಖನಗಳನ್ನು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net