ಜಿಲ್ಲೆಯ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ

Kannada Rajyotsava
Published on

ಮೈಸೂರು: ಸುವರ್ಣ ಮಹೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಐವರಿಗೆ ಜಿಲ್ಲೆಯಿಂದ ಪ್ರಾತಿನಿಧ್ಯ ಕೊಡಲಾಗಿದೆ. ಅಲ್ಲದೆ ಸುವರ್ಣ ಮಹೋತ್ಸವದ ನೆನಪಿಗಾಗಿ 50 ಪುರುಷ ಹಾಗೂ 50 ಮಹಿಳೆಯರಿಗೆ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದ್ದು, ಜಿಲ್ಲೆಯಿಂದ ಇಬ್ಬರು ಪುರುಷ, ಇಬ್ಬರು ಮಹಿಳೆಯರಿಗೆ ಪ್ರಶಸ್ತಿ ಲಭಿಸಿದೆ.

ಅಲ್ಲದೆ ಜಿಲ್ಲೆಯವರೇ ಅದ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪದ್ಮಶೇಖರ್ ಅವರಿಗೆ ಕೊಡಗು ಜಿಲ್ಲೆಯಿಂದ ರಾಜ್ಯೋತ್ಸವ ಪ್ರಶಸ್ತಿ ದೊರೆತ್ತಿದ್ದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರಿಗೆ ಚಿಕ್ಕಮಗಳೂರಿನಿಂದ ಪ್ರಾತಿನಿಧ್ಯ ನೀಡಲಾಗಿದೆ. ಹಾಗೆಯೇ ಮೈಸೂರಿನಲ್ಲಿ ನೆಲೆನಿಂತಿರುವ ರಂಗಭೂಮಿ ಕಲಾವಿದೆ ಸರಸ್ವತಿ (ಜುಲೇಖಾ ಬೇಗಂ) ಅವರಿಗೆ ಯಾದಗಿರಿ ಜಿಲ್ಲೆಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಘೋಷಿಸಲಾಗಿದೆ.

ಮೈಸೂರಿನ ಕಲಾವಿದ ಜನಾರ್ದನ (ಜನ್ನಿ) ಹಾಗೂ ಕ್ಲಾರಿಯೋನೆಟ್ ವಾದಕ ಡಿ.ರಾಮು ಅವರಿಗೆ ರಂಗಭೂಮಿ ಕ್ಷೇತ್ರದಿಂದ, ಅಯೋಧ್ಯೆಯಲ್ಲಿ ಬಾಲರಾಮಮೂರ್ತಿ ಕೆತ್ತನೆ ಮಾಡಿದ್ದ ಕಲಾವಿದ ಅರುಣ್‌ಯೋಗಿಗೆ ಶಿಲ್ಪಕಲೆಗಾಗಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಇನ್ನೂ ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಸತ್ಯನಾರಾಯಣ ಮೈಸೂರು ಅವರಿಗೆ ವೈದ್ಯಕೀಯ ಕ್ಷೇತ್ರದಿಂದ, ವಿದುಷಿ ಲಲಿತಾರಾವ್ ಅವರಿಗೆ ನೃತ್ಯ ಕ್ಷೇತ್ರದಿಂದ ಪ್ರಶಸ್ತಿ ನೀಡಲಾಗಿದೆ.

ಕ್ಲಾರಿಯೋನೆಟ್ ವಾದಕ ಡಿ.ರಾಮು

ರಂಗಭೂಮಿ, ಸಿನಿಮಾ, ಇನ್ನಿತರ ಕಾರ್ಯಕ್ರಮದಲ್ಲಿ ಕ್ಲಾರಿಯೋನೆಟ್ ವಾದಕರಾಗಿ ಗುರುತಿಸಿಕೊಂಡಿರುವ ನಗರದ ನಜರ್‌ಬಾದ್ ನಿವಾಸಿ 87 ವರ್ಷದ ಡಿ.ರಾಮು ಅವರಿಗೆ ಪ್ರಶಸ್ತಿ ಲಭಿಸಿದೆ. ಇವರು ರಂಗಭೂಮಿಯೊಂದಿಗೆ ಸುಗಮ ಸಂಗೀತ, ನಾಟ್ಯ ಮತ್ತು ಸಂಗೀತ, ಸಿನಿಮಾ ಕ್ಷೇತ್ರದಲ್ಲಿ ಸಂಗೀತ ಸೇವೆ ಸಲ್ಲಿಸಿದ್ದಾರೆ. ರಂಗಾಯಣ, ಚಾಮುಂಡೇಶ್ವರಿ, ಹಿರಣಯ್ಯ ಸೇರಿದಂತೆ ಹಲವು ನಾಟಕ ಕಂಪನಿಗಳಲ್ಲಿ ಸಂಗೀತ ವಾದ್ಯಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವು ನಾಟಕಗಳಲ್ಲಿ ಹಿನ್ನೆಲೆ ಸಂಗೀತಗಾರರಾಗಿ ಸೇವೆ ಸಲ್ಲಿಸಿದ್ದಾರೆ. ದಸರಾ ಮಹೋತ್ಸವ, ಶ್ರೀಗಣಪತಿ ಸಚ್ಚಿದಾನಂದ ಆಶ್ರಮ, ಸುತ್ತೂರುಮಠ ಸೇರಿದಂತೆ ಹಲವು ಕಡೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ರಾಮು ಅವರನ್ನು ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ.

ಗುರುತಿಸಿರುವುದು ಸಂತಸವಾಗಿದೆ

ನಾಟಕ, ಆರ್ಕೆಸ್ಟ್ರಾ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕ್ಲಾರಿಯೋನೆಟ್ ಸಂಗೀತ ವಾದ್ಯ ನುಡಿಸುತ್ತ 53 ವರ್ಷಗಳಿಂದ ಕಲಾಸೇವೆ ಮಾಡಿಕೊಂಡು ಬಂದಿದ್ದೇನೆ. ನಮ್ಮ ಕೆಲಸವನ್ನು ನಾವು ಮಾಡಿದರೆ ಮನ್ನಣೆ ಇದ್ದೇ ಇದೆ ಎನ್ನುವುದಕ್ಕೆ ಈ ಪ್ರಶಸ್ತಿ ಬಂದಿರುವುದೇ ಸಾಕ್ಷಿ. ಸರ್ಕಾರ ನನ್ನಂತಹ ಕಲಾವಿದರನ್ನು ಗುರುತಿಸಿರುವುದು ಸಂತಸ ತಂದಿದೆ.

ಡಿ.ರಾಮು, ಕ್ಲಾರಿಯೋನೆಟ್ ವಾದಕ

ಜನಮನದ ಜನಾರ್ದನ್(ಜನ್ನಿ)

ಬೀದಿನಾಟಕಗಳ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದು ತಮ್ಮ ಕಂಚಿನ ಕಂಠದ ಧ್ವನಿ ಮೂಲಕ ಜನಪ್ರಿಯವಾಗಿರುವ ಎಚ್.ಜನಾರ್ದನ (ಜನ್ನಿ) ರಂಗಾಯಣದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ನಾಲ್ಕುವರೆ ದಶಕದಿಂದ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜನ್ನಿ ಅವರು ದಿಲ್ಲಿಯ ಎನ್‌ಎಸ್‌ಡಿಯಲ್ಲಿ ನಿರ್ದೇಶನ ತರಬೇತಿ ಪಡೆದಿದ್ದಾರೆ. ಅಲ್ಲದೆ ಇವರ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ.

ಸಮುದಾಯ ಮತ್ತು ಸಾಂಸ್ಕೃತಿಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾವಿರಾರು ಹಳ್ಳಿಗಳನ್ನು ಸುತ್ತಿ ಸಮುದಾಯದ ರಂಗ ಘಟಕ ಕಟ್ಟಿ ಬೆಳೆಸಿದ್ದಾರೆ. ಜತೆಗೆ ಬೀದಿ ನಾಟಕದ ರೂವಾರಿಯಾಗಿದ್ದಾರೆ. ಸಾಕ್ಷರತಾ ಆಂದೋಲನಕ್ಕೆ ಸಾಂಸ್ಕೃತಿಕ ಆಯಾಮ ಕೊಟ್ಟವರಲ್ಲಿ ಇವರು ಒಬ್ಬರು. ಜನಮನ ಸಾಂಸ್ಕೃತಿಕ ಸಂಘಟನೆಯ ಮೂಲಕ ಯುವ ಜನತೆಗೆ ರಂಗ ತರಬೇತಿ ನೀಡಿದ್ದಾರೆ. ರಂಗ ಸಂಘಟಕರಾಗಿ, ಗಾಯಕ ಮತ್ತು ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಬದ್ಧತೆ ಕೆಲಸ ಗುರುತಿಸಲಾಗಿದೆ.

ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವವರನ್ನು ಗುರುತಿಸಿ ಅವರಿಗೊಂದು ಮಾನ್ಯತೆ ನೀಡುವುದು ಉತ್ತಮ ಸಾಂಸ್ಕೃತಿಕ ಧೋರಣೆಯಾಗಿದೆ. ಪ್ರಶಸ್ತಿ ನೀಡಿದ್ದಕ್ಕೆ ರಂಗಭೂಮಿಯ ಗೆಳೆಯರ ಪರವಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ.

ಜನಾರ್ದನ್ (ಜನ್ನಿ)

ನಾಟ್ಯ ಕಲಾವಿದೆ ಲಲಿತಾ ಕೋರೆ ರಾವ್

ಮೈಸೂರು ಶೈಲಿಯ ಭರತನಾಟ್ಯ ಕಲೆಯನ್ನು 53 ವರ್ಷಗಳಿಂದ ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವ ವಿದುಷಿ ಲಲಿತ ರಾವ್ ಕೋರೆ ಎಂ.ರಾವ್ ಅವರು, ಅನೇಕ ವಿದ್ಯಾರ್ಥಿಗಳಿಗೆ ಕಲೆ ಕಲಿಸಿದ್ದಾರೆ. ಲಲಿತಾ ಅವರು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಬಿಎಸ್ಸಿ ಮತ್ತು ಬಿಇಡಿ ಪದವಿ ಪಡೆದಿದ್ದು, ಕರ್ನಾಟಕ ಕನ್ನಡ ಸಾಹಿತ್ಯ ನಡೆಸುವ ಕಾವ್ಯ ಮತ್ತು ನೃತ್ಯ ವಿಷಯಗಳಲ್ಲಿ ರ‌್ಯಾಂಕ್ ಪಡೆದಿದ್ದಾರೆ.

ನೃತ್ಯ ಶಿಕ್ಷಣದೊಂದಿಗೆ ಜಿಎಸ್‌ಎಸ್ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸಹ ಸೇವೆ ಸಲ್ಲಿಸಿದ್ದಲ್ಲದೆ ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನಾಟ್ಯ ಅಲ್ಲದೆ ಶ್ರೀ ಶಕ್ತಿ ಪ್ರತಿಷ್ಠಾನ, ಭಾರತೀಯ ನೃತ್ಯ ಕಲಾ ಪರಿಷತ್ ಸೇರಿದಂತೆ ನಾನಾ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಹುಮ್ಮಸ್ಸು ಹೆಚ್ಚಿಸಿದೆ

ಸುದೀರ್ಘವಾಗಿ ಕಲಾರಾಧನೆ ಮಾಡಿಕೊಂಡು ಬಂದ ನನ್ನ ಸೇವೆ ಗುರುತಿಸಿ ಸರ್ಕಾರ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ. ಅಲ್ಲದೇ ಇನ್ನಷ್ಟು ಹುಮ್ಮಸ್ಸು ಹೆಚ್ಚಿಸಿದೆ. ನಿರಂತರವಾಗಿ ನೃತ್ಯ ಶಿಕ್ಷಣ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೀಡಿದ್ದೇನೆ. ಕಳೆದ ಐದು ದಶಕಗಳಲ್ಲಿ ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಸಂತಸ ತಂದಿದೆ.

ಲಲಿತ ಕೋರೆ ಎಂ.ರಾವ್, ವಿದುಷಿ

ಶಿಲ್ಪಿ ಡಾ.ಅರುಣ್ ಯೋಗಿರಾಜ್

ಅಯೋಧ್ಯೆಯ ರಾಮಮಂದಿರದಲ್ಲಿ ನಿರ್ಮಿಸಿರುವ ರಾಮ ಲಲ್ಲಾ ಮೂರ್ತಿಯ ಕೆತ್ತನೆ ಮಾಡುವ ದೇಶದ ಮನೆ ಮಾತಾಗಿರುವ ಶಿಲ್ಪಕಲಾ ಕುಟುಂಬದ ಅರುಣ್ ಯೋಗಿರಾಜ್ ಅವರಿಗೆ ಪ್ರಶಸ್ತಿ ಲಭಿಸಿದೆ. ಎಂಬಿಎ ಪದವೀಧರರಾಗಿರುವ ಅರುಣ್ ಕೆಲ ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿ ಮತ್ತೆ ಶಿಲ್ಪಕಲೆಗೆ ಹಿಂದಿರುಗಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆ ಪ್ರಯುಕ್ತ ನವದೆಹಲಿಯ ಇಂಡಿಯಾ ಗೇಟ್ ಬಳಿ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆ ನಿರ್ಮಿಸಿದರು. ಇವರ ಶಿಲ್ಪಕಲಾ ಸೇವೆಯನ್ನು ಗುರುತಿಸಿ ಉತ್ತರ ಪ್ರದೇಶದ ಸಂಸ್ಕೃತ ವಿವಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಜವಾಬ್ದಾರಿ ಹೆಚ್ಚಿಸಿದೆ

ರಾಜ್ಯ ಸರ್ಕಾರ ಪ್ರಶಸ್ತಿ ನೀಡಿರುವುದು ಜವಾಬ್ದಾರಿ ಹೆಚ್ಚಿಸಿದೆ. ನನ್ನಂತಹ ಯುವ ಸಾಧಕರನ್ನು ಗುರುತಿಸಿರುವುದು ಸಂತಸವಾಗಿದ್ದು, ಯುವ ಜನತೆಗೆ ಪ್ರೇರಣೆಯಾಗಿದೆ. ಅಯೋಧ್ಯೆಯ ರಾಮಲಲ್ಲಾ ಮೂರ್ತಿಯೊಂದಿಗೆ ದೇಶದ ಗಮನ ಸೆಳೆಯುವಂತಹ ಶಿಲ್ಪ ಕೆತ್ತನೆ ಕಾರ್ಯಗಳನ್ನು ಮಾಡಿ ದೇಶದ ಜನರ ಮನವನ್ನು ಗೆಲ್ಲುವ ಅವಕಾಶ ಸಿಕ್ಕಿತು. ಈಗ ಸರ್ಕಾರ ಗುರುತಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

ಅರುಣ್ ಯೋಗಿರಾಜ್, ಶಿಲ್ಪಿ.

ಡಾ.ಸತ್ಯನಾರಾಯಣಗಾಗಿ ಹುಡುಕಾಟ

ವೈದ್ಯಕೀಯ ಕ್ಷೇತ್ರದಿಂದ ಮೈಸೂರು ಜಿಲ್ಲೆಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದ ಡಾ.ಮೈಸೂರು ಸತ್ಯನಾರಾಯಣ ಅವರು ಯಾರು ಎನ್ನುವ ಹುಡುಕಾಟ ಮಾಧ್ಯಮ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯಿತು.

ಡಾ.ಸತ್ಯನಾರಾಯಣ ಹೆಸರಿನ ಹಲವಾರು ವೈದ್ಯರು ಮೈಸೂರಿನಲ್ಲಿ ಇರುವುದರಿಂದ ಯಾರು ಪ್ರಶಸ್ತಿ ಪುರಸ್ಕೃತರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತು. ಹಲವರು ಸತ್ಯನಾರಾಯಣ ಹೆಸರಿನ ವೈದ್ಯರಿಗೆ ಅಭಿನಂದನೆ ಸಲ್ಲಿಸಿದಾಗ ಅವರಿಗೂ ಮುಜುಗರ, ಕೆಲವರು ಹೌದೇ ಎನ್ನುವ ಮರು ಪ್ರಶ್ನೆ ಕೇಳಿ ಬಂತು.

ಅಂತಿಮವಾಗಿ ಹೆಸರಿನೊಂದಿಗೆ ಮೈಸೂರು ಸೇರಿಸಿಕೊಂಡಿರುವ ಡಾ.ಸತ್ಯನಾರಾಯಣ ಅವರು ಬೆಂಗಳೂರು ಹಳೆಯ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಖಚಿತವಾಯಿತು. ಏಳು ತಲೆಮಾರು ಮೈಸೂರಿನಲ್ಲಿಯೇ ನೆಲೆಸಿದ್ದ ಸತ್ಯನಾರಾಯಣ ಅವರು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದವರಾಗಿದ್ದಾರೆ.

ಎಲ್ಲ ದೇವರ ಕೃಪೆ

ಎಲ್ಲವನ್ನೂ ವೈದ್ಯರೇ ಮಾಡುತ್ತಾನೆ ಎನ್ನುವುದಕ್ಕಿಂತ ದೇವರು ನಮ್ಮಿಂದ ಕೆಲಸ ಮಾಡಿಸುತ್ತಾನೆ. ಹಾಗಾಗಿ ನಾವು ರೋಗಿಗಳಲ್ಲಿ ದೇವರನ್ನು ಕಾಣುತ್ತೇವೆ. ಪ್ರಶಸ್ತಿ, ಪುರಸ್ಕಾರಕ್ಕಿಂತ ಸೇವೆ ಮುಖ್ಯ. ಆಸ್ಪತ್ರೆಗೆ ಬಂದವರು ನಗುಮುಖದಿಂದ ಹೋದರೆ ಅದಕ್ಕಿಂತ ಸಂತೋಷ ಬೇರೊಂದಿಲ್ಲ.

ಡಾ. ಸತ್ಯನಾರಾಯಣ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net