ಆಟೋ ಚಾಲಕರ ಸಂಘದಿಂದ 1 ರಂದು ರಾಜ್ಯೋತ್ಸವ

Published on

ಸೋಮವಾರಪೇಟೆ : ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನ. 1 ರಂದು 18ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿದೆ.

ಇದರ ಅಂಗವಾಗಿ ತಾಲೂಕು ಮಟ್ಟದಲ್ಲಿ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ, ರಾಜ್ಯ ಮಟ್ಟದ ನೃತ್ಯ ಕಲಾ ವೈಭವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಆರ್. ಉಮೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನ. 1ರಂದು ಬೆಳಗ್ಗೆ 7.30ಕ್ಕೆ ಆಟೋ ನಿಲ್ದಾಣದಲ್ಲಿ ನಿರ್ಮಿಸಿರುವ ಕನ್ನಡ ಧ್ವಜ ಸ್ಥಂಭದ ಉದ್ಘಾಟನೆ ಮತ್ತು ನಿರಂತರ ಹಾರಾಟದ ಧ್ವಜಾರೋಹಣ ಮಾಡಲಾಗುವುದು. 8 ಗಂಟೆಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಿಸಲಾಗುವುದು ಎಂದರು. 8.30ಕ್ಕೆ ಕಕ್ಕೆಹೊಳೆ ಜಂಕ್ಷನ್‌ನಲ್ಲಿರುವ ಬಸವೇಶ್ವರ ಪ್ರತಿಮೆ ಮುಂಭಾಗದಿಂದ ಆಟೋಗಳ ಮೆರವಣಿಗೆ ನಡೆಯಲಿದೆ. ನಂತರ ಜೇಸಿ ವೇದಿಕೆಯಲ್ಲಿ ಸ್ತಬ್ಧಚಿತ್ರಗಳೊಂದಿಗೆ ಆಗಮಿಸುವ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಬೆಳಗ್ಗೆ 10ಕ್ಕೆ ರಾಜ್ಯೋತ್ಸವ ಸಮಾರಂಭದ ಉದ್ಘಾಟನೆ ನಡೆಯಲಿದೆ. ನಂತರ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದಲ್ಲಿ ತಾಲೂಕು ಮಟ್ಟದ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ಜರುಗಲಿದೆ. ವಿಜೇತ ತಂಡಗಳಿಗೆ ಟ್ರೋಫಿ ನೀಡಲಾಗುವುದು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ವಿವರಿಸಿದರು.

ಸಂಜೆ 5 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡಿದ 7 ಗಣ್ಯರಿಗೆ ಸನ್ಮಾನಿಸಲಾಗುವುದು. ಆಟೋ ಚಾಲಕರಿಗೆ ಆಯೋಜಿಸಿದ್ದ ಕ್ರೀಡಾಕೂಟ ದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ನಂತರ ಸಾರ್ವಜನಿಕ ವಿಭಾಗದ ನೃತ್ಯ ಕಲಾ ವೈಭವ ಸ್ಪರ್ಧೆ ನಡೆಯಲಿದೆ ಎಂದರು.ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವೈ. ಜೀವನ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಬೇಟು, ಸಹ ಕಾರ್ಯದರ್ಶಿ ಫೆಲಿಕ್ಸ್, ಸದಸ್ಯ ಎಸ್. ರವಿಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net