

ಹೊಳೆನರಸೀಪುರ: ಕನ್ನಡ ಭಾಷೆಯನ್ನು ಹೆತ್ತ ತಾಯಿಯಂತೆ ಗೌರವಿಸಿ ಎಂದು ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ ಹೇಳಿದರು.
ಬಾಚನಹಳ್ಳಿ ಗ್ರಾಮದ ಸಂಸ್ಕಾರ್ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಕನಕದಾಸರ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಯಾವುದೇ ಭಾಷೆಯನ್ನು ಕಲಿತು ಮಾತನಾಡಿದರೂ ನಮ್ಮ ಮಾತೃಭಾಷೆಯಲ್ಲಿ ವ್ಯಕ್ತಪಡಿಸುವ ಭಾವನೆಗಳು ಮಾತ್ರ ಹೆಚ್ಚು ಪರಿಣಾಮ ಬೀರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಮಾತೃಭಾಷೆಯನ್ನು ಚನ್ನಾಗಿ ಕಲಿಯಬೇಕು. ಇತರ ಭಾಷೆಗಳನ್ನೂ ತಪ್ಪುಗಳಿಲ್ಲದೆ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಕಲಿತರೆ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ದೊಡ್ಡಕಾಡನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಹೇಶಪ್ಪ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಪಾಲಕರೂ ಗಮನ ಹರಿಸಬೇಕು. ಪ್ರತಿ ದಿನ ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಎಚ್ಚರ ವಹಿಸಬೇಕು ಎಂದರು.
ದೊಡ್ಡಕಾಡನೂರು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಚಂದ್ರಶೇಖರ್, ಶಾಲೆಯ ಕಾರ್ಯದರ್ಶಿ ಪ್ರೇಮಕುಮಾರ್, ಶಿಕ್ಷಕಿಯರಾದ ಮಂಜುಳಾ, ಮಮತಾ, ಲತಾ, ಚಂದ್ರಶೇಖರ್ ಇದ್ದರು.