

ಗೋಕರ್ಣ: ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಶುಕ್ರವಾರ ಶಿವಯೋಗ ಪುಣ್ಯ ಕಾಲದಲ್ಲಿ ಮಹಾಗಣಪತಿ ಮತ್ತು ಮಹಾಬಲೇಶ್ವರ ಆತ್ಮಲಿಂಗಕ್ಕೆ ಶಾಸ್ತ್ರೋಕ್ತ ಪೂಜೆ ಕೈಗೊಂಡರು.
ಪಾರಂಪರಿಕ ಮುಖ್ಯ ಅರ್ಚಕ ವೇ. ಶೇಷ ಸುಬ್ರಾಯ ಅಡಿಮೂಳೆ ಅವರು ಪೂಜೆ ನೆರವೇರಿಸಿಕೊಟ್ಟರು. ಮಹಾಬಲೇಶ್ವರ ಮಂದಿರ ವತಿಯಿಂದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಕೋರೆ ಅವರನ್ನು ಶಾಲು ಹೊದಿಸಿ ಗೌರವಿಸಿದರು. ವೇ. ಶಿತಿಕಂಠ ಹಿರೇ ಉದ್ಯಮಿ ನಾಗರಾಜ ಹಿತ್ತಲಮಕ್ಕಿ ಇದ್ದರು.
ಪ್ರಾಧಿಕಾರ ಅಗತ್ಯ: ನಂತರ ಇಲ್ಲಿನ ಓಂ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭಾಕರ ಕೋರೆ, ನಮ್ಮ ಕುಟುಂಬ ಅನೇಕ ತಲೆಮಾರುಗಳಿಂದ ಶಿವರಾತ್ರಿ ಸಮಯದಲ್ಲಿ ಆತ್ಮಲಿಂಗವನ್ನು ಪೂಜಿಸುವ ಪದ್ಧತಿ ಕಾಪಾಡಿಕೊಂಡು ಬಂದಿದೆ. ಕಳೆದ ಐದು ದಶಕಕ್ಕೂ ಹೆಚ್ಚಿನ ಕಾಲದಿಂದ ನಾನು ಅದನ್ನು ಮುಂದುವರೆಸಿದ್ದೇನೆ. ಆದರೆ, ಕಳೆದ ಹಲವು ವರ್ಷಗಳಲ್ಲಿ ಗೋಕರ್ಣ ಕ್ಷೇತ್ರ ಉಳಿದ ಖ್ಯಾತ ಕ್ಷೇತ್ರಗಳಿಗೆ ಹೋಲಿಸಿದರೆ ಏನೇನೂ ಅಭಿವೃದ್ಧಿ ಕಾಣದಿರುವುದು ವಿಷಾದಕರವಾಗಿದೆ. ಇಲ್ಲಿ ಎಲ್ಲೂ ನೋಡ ಸಿಗದ ಐದು ಪ್ರತ್ಯೇಕ ಬೀಚ್ಗಳಿವೆ. ಆದರೆ, ವಿಶ್ವದ ಅತ್ಯಂತ ಅಸ್ವಚ್ಛ ಬೀಚ್ಗಳಲ್ಲಿ ಗೋಕರ್ಣದ ಬೀಚ್ ಸೇರ್ಪಡೆಯಾಗಿದೆ. ಮೂಲ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ಗೋಕರ್ಣ ತಾಲೂಕು ಆಗುವ ಅರ್ಹತೆ ಪಡೆದಿದ್ದರೂ ಆ ಬಗ್ಗೆ ಪ್ರಯತ್ನಗಳೇ ಆಗಿಲ್ಲ. ನಗರಸಭೆ ಮಟ್ಟಕ್ಕೆ ಏರಬೇಕಾಗಿದ್ದ ಗೋಕರ್ಣ ಇಂದಿಗೂ ಗ್ರಾಮ ಪಂಚಾಯಿತಿ ಸ್ಥರದಲ್ಲಿ ಇರುವುದರಿಂದ ಅಭಿವೃದ್ಧಿಗೆ ತೀವ್ರ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ಅಭಿವೃದ್ಧಿಗೆ ಪ್ರತ್ಯೇಕವಾದ ಪ್ರಾಧಿಕಾರ ರಚಿಸುವುದು ಅತ್ಯಂತ ಸೂಕ್ತವಾಗಿದ್ದು ಇದಕ್ಕೆ ಎಲ್ಲ ಬಗೆಯ ಸಹಾಯ, ಸಹಕಾರ ನೀಡುತ್ತೇನೆ ಎಂದು ಅವರು ನುಡಿದರು.