

ಬೆಂಗಳೂರು: ರಾಜ್ಯಸಭಾ ಚುನಾವಣೆ ಮತದಾನ ಆರಂಭವಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ-ಜೆಡಿಎಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಏತನ್ಮಧ್ಯೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಬಿ.ಎಸ್.ಯಡಿಯೂರಪ್ಪ ಅವರು ಕರೆ ಮಾಡಿ ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಹೇಳುತ್ತಿದ್ದು, ಇವರಿಗೆ ಕಾಮನ್ ಸೆನ್ಸ್ ಇದೆಯೇ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜಕೀಯದಲ್ಲಿ ಸ್ವಲ್ಪ ಬೇಸಿಕ್ ಕಾಮನ್ ಸೆನ್ಸ್ ಇರಬೇಕು. 136 ಶಾಸಕರು ಗೆದ್ದು ಆಡಳಿತ ನಡೆಸುತ್ತಿದ್ದೇವೆ. ಆದರೂ ಬಿಜೆಪಿ ನಾಯಕರು ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ನಿನ್ನೆ ಶಾಮನೂರು ಶಿವಶಂಕರಪ್ಪ ಅವರಿಗೆ ಬಿಎಸ್ವೈ ಕರೆ ಮಾಡಿ ಮತ ಹಾಕಲು ಹೇಳಿದ್ದಾರೆ. ಹಿರಿಯ ನಾಯಕರನ್ನೂ ಅವರು ಬಿಡುತ್ತಿಲ್ಲ. ನಮ್ಮ 42 ಶಾಸಕರನ್ನು ಬಿಜೆಪಿ-ಜೆಡಿಎಸ್ ನಾಯಕರು ಸಂಪರ್ಕಿಸಿದ್ದಾರೆ. ಇಲ್ಲಿ ಗೆದ್ದಿರುವ ಶಾಸಕರನ್ನು ಹಣ ಕೊಟ್ಟು ಕುದುರೆ ವ್ಯಾಪಾರ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹೆದರಿಸಿ ಬೆದರಿಸಿ ವೋಟ್ ಹಾಕಿ ಅನ್ನುವುದು ಸರಿಯಲ್ಲ. ಹಣ ಇದೆ ಎಂದು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ನೆಂಟಸ್ತನ ಬೇರೆ, ಬೀಗತನ ಬೇರೆ, ರಾಜಕಾರಣ ಬೇರೆ ಎಂದು ಡಿ.ಕೆ.ಶಿವಕುಮಾರ್ ಗುಡುಗಿದರು.