ಸ್ವಾವಲಂಬಿ ಭಾರತ ನಿರ್ಮಾಣದ ಸಂಕಲ್ಪ, ಸ್ವದೇಶಾಭಿಮಾನ ಬೆಳೆಸಲು ಸಮ್ಮೇಳನ, ಅಭಿಯಾನದ ವಿವರ ಬಿಚ್ಚಿಟ್ಟ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ

IRANNA KADADI PRESS MEET
ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ಎಸ್.ಎ. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ದೇಶವನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಆತ್ಮ ನಿರ್ಭರ ಭಾರತ ಘೋಷವಾಕ್ಯದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದೀಗ ಆ ನಿಟ್ಟಿನಲ್ಲಿ ಸ್ವದೇಶೀ ಚಿಂತನೆ ಬೆಳೆಸಲು ಅಭಿಯಾನ ಹಮ್ಮಿಕೊಂಡಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ಈಗಾಗಲೇ ದೇಶಾದ್ಯಂತ ಸ್ವದೇಶಿ ಜಾಗೃತಿ ಅಭಿಯಾನ ನಡೆಯುತ್ತಿದ್ದು, ರಾಜ್ಯದಲ್ಲೂ ಚುರುಕುಗೊಳಿಸಲಾಗುತ್ತಿದೆ. ಭಾರತ ಸ್ವಾವಲಂಬಿ ಮತ್ತು ಸದೃಢ ರಾಷ್ಟ್ರವಾಗಲಿ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಅವಶ್ಯ. ಹೀಗಾಗಿ ಮಹಿಳೆಯರು, ಯುವಕರು, ವ್ಯಾಪಾರಿಗಳ ಮತ್ತಿತರ ಕ್ಷೇತ್ರಗಳ ಜನರನ್ನು ಸೇರಿಸಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳ ಸಂಕಲ್ಪ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಸ್ವದೇಶಿ ವಸ್ತುಗಳ ಮಾರಾಟ ಮೇಳ, ವಾಕಾಥಾನ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನರಲ್ಲಿ ಸ್ವದೇಶಿ ಅಭಿಮಾನ ಜಾಗೃತಗೊಂಡಿದೆ. ಮಾತ್ರವಲ್ಲದೇ, ರಾಷ್ಟ್ರಾಭಿಮಾನ ಇಮ್ಮಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. 2047 ರ ಸ್ವಾತಂತ್ರ್ಯ ಉತ್ಸವದ ಶತಮಾನೋತ್ಸವ ಆಚರಣೆಯನ್ನು ಗುರಿಯಾಗಿಸಿಕೊಂಡು ಈಗಿನಿಂದಲೇ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದೀಗ ಮೊದಲ ಹಂತದಲ್ಲಿ 90 ದಿನ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗಾಳಿ

ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾದ ಕಾರಣ ಕೃಷ್ಣಾ, ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಸೇರಿದಂತೆ ರಸ್ತೆಗಳು, ಮನೆಗಳು ಹಾನಿಗೊಳಗಾಗಿವೆ. ಇಂಥ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಧಾವಿಸುವುದನ್ನು ಬಿಟ್ಟು ಕಾಲಹರಣ ಮಾಡುತ್ತಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ತಕ್ಷಣಕ್ಕೆ ಪರಿಹಾರ ಘೋಷಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಕಡಾಡಿ ಒತ್ತಾಯಿಸಿದರು.

ರಾಜ್ಯದಲ್ಲಿ ರಸ್ತೆಗಳು ಹಾಳಾಗಿ ಜನ ಸಂಚರಿಸುವುದೇ ದುಸ್ತರವಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಹೆಲಿಕಾಪ್ಟರ್ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಲೋಕೋಪಯೋಗಿ ಸಚಿವರಂತೂ ಸ್ವಂತ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ. ಜನ ರಸ್ತೆ ಮೇಲೆ ಓಡಾಡುವುದೇ ದುಸ್ತರವಾಗಿರುವಾಗ ಕಾಂಗ್ರೆಸ್ ನಾಯಕರು ಹೆಲಿಕಾಪ್ಟರ್‌ನಲ್ಲಿ ಓಡಾಡಲು ಬಯಸಿರುವುದು ಸೋಜಿಗ ಎಂದು ಕಡಾಡಿ ಅವರು ವ್ಯಂಗ್ಯವಾಡಿದರು.

ಈ ಹಿಂದೆ ಕಳಪೆ ಬಿತ್ತನೆ ಬೀಜ ಮಾರಾಟದಿಂದಾಗಿ ರೈತರು ಅಪಾರ ಬೆಳೆ ಹಾನಿ ಅನುಭವಿಸಿದರು. ಈವರೆಗೂ ಪರಿಹಾರ ನೀಡಿಲ್ಲ. ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪಾರ ಹಾನಿಯಾಗಿದೆ. ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಪ್ರವಾಹ ಉಂಟಾದಾಗ ತಕ್ಷಣಕ್ಕೆ 10 ಸಾವಿರ ರೂಪಾಯಿ ಪರಿಹಾರ ನೀಡಿದ್ದರು. ಭಾಗಶಃ ಬಿದ್ಧ ಮನೆಗಳಿಗೆ 3 ಲಕ್ಷ ಹಾಗೂ ಸ್ವಲ್ಪ ಹಾನಿಯಾದ ಮನೆಗಳಿಗೆ 1.50 ಲಕ್ಷ ಪರಿಹಾರ ನೀಡಲಾಗಿತ್ತು. ಇಂದಿನ ಸರ್ಕಾರ ಈವರೆಗೂ ಅಂಥ ಯಾವುದೇ ನಿರ್ಧಾರ ಕೈಗೊಂಡಿಲ್ಲವೆಂದು ಹರಿಹಾಯ್ದರು.

ಜಾತಿ ಸಮೀಕ್ಷೆ ವಿರುದ್ಧ ವಾಗ್ದಾಳಿ

ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಜೊತೆ ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ವಿಚಾರಣೆ ಇನ್ನೂ ಮುಗಿದಿಲ್ಲ. ಕೆಲವು ನಿರ್ಬಂಧ ವಿಧಿಸಿದೆ. ಆದರೆ, ಈ ಸಮೀಕ್ಷೆ ಹಿಂದಿನ ಉದ್ದೇಶವಾದರೂ ಏನು? ಸಮೀಕ್ಷಾ ಪಟ್ಟಿಯಲ್ಲಿರುವ 60 ಪ್ರಶ್ನಾವಳಿಯಲ್ಲಿ ಜಾತಿ, ಧರ್ಮ ಮತ್ತಿತರ ಮಾಹಿತಿ ಕೇಳಿದ್ದು ಯಾವ ಪುರುಷಾರ್ಥಕ್ಕೆ? ಇತರೆ ಕಾಲಂ ಸೃಷ್ಟಿ ಮಾಡಿ ಹೊಸ ಧರ್ಮ ಸೃಷ್ಠಿಸಲು ಮುಂದಾಗಿರುವುದೇಕೆ? ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, ನವೆಂಬರ್ ಕ್ರಾಂತಿ ಹಿನ್ನೆಲೆ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಇಂಥ ಕೆಲಸಕ್ಕೆ ಕೈ ಹಾಕಿದರೇ ಎಂಬ ಅನುಮಾನ ಕಾಡುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ಎಸ್.ಎ. ಪಾಟೀಲ, ಉಮೇಶ ಕಾರಜೋಳ, ಸೋಮನಗೌಡ ಪಾಟೀಲ ಸಾಸನೂರ, ಕಾಸುಗೌಡ ಬಿರಾದಾರ, ಕೃಷ್ಣಾ ಗುನ್ಹಾಳಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net