

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನಗರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಗೋಕಾಕ ಜಿಲ್ಲಾ ರಚನೆ ಆಗುವುದು ಶತಸಿದ್ಧ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಪೂರಕವೆಂಬಂತೆ ಗೋಕಾಕ ರೋಡ್ ರೈಲು ನಿಲ್ದಾಣ ಅಭಿವೃದ್ಧಿಯೇ ಸಾಕ್ಷಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗೋಕಾಕ ರೋಡ್ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿವೃದ್ಧಿಗೊಂಡಿರುವ ರೈಲ್ವೆ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಶಕಗಳಿಂದ ಬೇಡಿಕೆಯಾಗಿಯೇ ಉಳಿದುಕೊಂಡಿರುವ ಗೋಕಾಕ ಜಿಲ್ಲಾ ರಚನೆ ಆಗುವುದು ಕಾಲ ಸನ್ನಿಹಿತವಾಗಿದೆ. ಇದಕ್ಕೆ ಗೋಕಾಕ ರೋಡ್ ರೈಲು ನಿಲ್ದಾಣ ಕಟ್ಟಡ ಮರುನಿರ್ಮಾಣ ಮತ್ತಷ್ಟು ಬಲ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೀಘ್ರ ವಂದೇ ಭಾರತ ಕಾರ್ಯಾಚರಣೆ:ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ಧಾರವಾಡ, ಬಾಗಲಕೋಟೆ, ಗದಗ, ಮುನಿರಾಬಾದ್ ಜಿಲ್ಲೆಯ ರೈಲು ನಿಲ್ದಾಣಗಳು ಈ ಭಾಗದ ಜನರಿಗೆ ಅತ್ಯಂತ ಅನುಕೂಲಕರವಾಗಿವೆ. ಬೆಳಗಾವಿ-ಬೆಂಗಳೂರು ನಡುವೆ ವಂದೇ ಭಾರತ ರೈಲು ಮಂಜೂರಾಗಿದ್ದು, ಅತಿ ಶೀಘ್ರದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಮಿರಜ್ ನಡುವೆ ಜನ ಸಾಮಾನ್ಯರ ಪ್ರಯಾಣಕ್ಕಾಗಿ ಮೆಮೋ ರೈಲು ಸಂಚಾರ ಆರಂಭಿಸುವಂತೆ ರೈಲ್ವೆ ಸಚಿವರ ಮೇಲೆ ಒತ್ತಡ ಹಾಕಲಾಗುವುದು ಎಂದರು.
ಗೋಕಾಕ ರೋಡ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಹೊಸ ನಿಲ್ದಾಣದ ಕಟ್ಟಡ, ಪಾರ್ಕಿಂಗ್ ಮತ್ತು ಸುಗಮ ವಾಹನ ಸಂಚಾರ ಪ್ರದೇಶ, ಹೊಸ ಪಾದಚಾರಿ ಸೇತುವೆ, ನವೀಕರಿಸಿದ ಶೌಚಾಲಯ, ವಿಶಾಲವಾದ ವಿಶ್ರಾಂತಿ ಕೋಣೆ, ಬೆಳಕು ಮತ್ತು ಡಿಜಿಟಲ್ ಮಾಹಿತಿ ವ್ಯವಸ್ಥೆ ಟಿಕೆಟ್ ಕೌಂಟರ್ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಈ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದರು.
ಮಾಜಿ ಸಚಿವ ಆರ್.ಎಂ.ಪಾಟೀಲ, ನೈರುತ್ಯ ರೈಲ್ವೆ ವಲಯದ ಮುಖ್ಯ ಕಮರ್ಷಿಯಲ್ ಮ್ಯಾನೇಜರ್ ಡಾ.ಅನೂಫ ಸಾಧು, ಡಿಆರ್‌ಯುಸಿಸಿ ಸದಸ್ಯ ಫಕೀರಗೌಡ ಸಿದ್ದನಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ರಾಮಣ್ಣ ಹುಕ್ಕೇರಿ, ರಾಜು ಕತ್ತಿ, ಸುರೇಶ ಪಾಟೀಲ, ಮಾರುತಿ ವಿಜಯನಗರ, ಮಹ್ಮದ ಗೌಸ ಬಾಗೇವಾಡಿ, ಹಿರಿಯ ವಿಭಾಗೀಯ ಸುರಕ್ಷಾ ನಿರೀಕ್ಷಕ ಡಾ.ಕಾರ್ತಿಕ, ಬೆಳಗಾವಿ ವಿಭಾಗದ ಕಮರ್ಷಿಯಲ್ ಮ್ಯಾನೇಜರ್ ಭೀಮಪ್ಪ ಮೇದಾರ, ರವೀಂದ್ರ ಮಾದರ, ಅಮರ ಬಡೋದೆ ಇತರರಿದ್ದರು.