

ಬೆಳಗಾವಿ: ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಬೇಕು ಮತ್ತು ಕನ್ನಡ ಭಾಷೆ ಬೆಳವಣಿಗೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
ರಾಜ್ಯಸಭೆಯ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಅವರು, ಆಚಾರ್ಯ ವಿನೋಬಾ ಭಾವೆ ಅವರು ಕನ್ನಡ ಲಿಪಿಯನ್ನು ವಿಶ್ವದ ಲಿಪಿಗಳ ಮಹಾರಾಣಿ ಎಂಬ ಬಿರುದು ನೀಡಿದ್ದರು. ಇಲ್ಲಿಯವರೆಗೆ ಕನ್ನಡ ಭಾಷೆಯ ಸಾಹ್ಯಿತಿಕ ವಿಭಾಗದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಕನ್ನಡ ಭಾಷೆಯು ಸುಮಾರು 3000 ವರ್ಷಗಳಿಗಿಂತ ಹೆಚ್ಚು ದೀರ್ಘ ಇತಿಹಾಸ ಹೊಂದಿದ್ದು, 6.5 ಕೋಟಿ ಗೂ ಅಧಿಕ ಜನ ಕನ್ನಡವನ್ನು ಮಾತೃ ಭಾಷೆಯಾಗಿ ಮಾತನಾಡುತ್ತಿದ್ದಾರೆ. ಕನ್ನಡ ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡಕ್ಕೆ 2008ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದೆ. ಹೀಗಾಗಿ ಭಾಷೆಯ ಬೆಳವಣಿಗೆ ಮತ್ತು ಸಂಶೋಧನೆಗಾಗಿ 2011ರಲ್ಲಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸ್ಥಾಪಿಸಿದೆ ಎಂದರು.
ಕನ್ನಡ ಭಾಷೆಯ ಅಧ್ಯಯನ ಮತ್ತು ಸಂಶೋಧನೆ ಉತ್ತೇಜಿಸಲು, ಕರ್ನಾಟಕ ಸರ್ಕಾರವು ಶಾಸ್ತ್ರೀಯ ಕನ್ನಡ ಅಧ್ಯಯನಕ್ಕಾಗಿ ಕೇಂದ್ರದ ಶಾಶ್ವತ ಕ್ಯಾಂಪಸ್‌ಗಾಗಿ ಸ್ಥಳ ಸಹ ಮಂಜೂರು ಮಾಡಿದೆ. ಆದರೆ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಇನ್ನೂ ಸ್ವಾಯತ್ತ ಸ್ಥಾನಮಾನ ನೀಡಿಲ್ಲ. ಇದಕ್ಕಾಗಿ 2020ರಲ್ಲಿ ಕರ್ನಾಟಕ ಸರ್ಕಾರವೂ ಕೂಡ ಒತ್ತಾಯ ಮಾಡಿದೆ. ಕನ್ನಡ ಭಾಷೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಶಾಸ್ತ್ರೀಯ ಕನ್ನಡದ ಶ್ರೇಷ್ಠ ಅಧ್ಯಯನ ಕೇಂದ್ರಕ್ಕೆ ತಮಿಳು ಭಾಷೆಯಂತೆ ಸ್ವಾಯತ್ತ ಸ್ಥಾನಮಾನ ತಕ್ಷಣವೇ ನೀಡಬೇಕು. ಹೆಚ್ಚಿನ ವಿದ್ಯಾರ್ಥಿಗಳು ಈ ಭಾಷೆಯ ಸಂಶೋಧನೆ ಮತ್ತು ಅಧ್ಯಯನಕ್ಕೆ ಪ್ರೇರೇಪಿಸಬೇಕು ಎಂದರು. ಈ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ನೀಡುವುದರಿಂದ ಕನ್ನಡ ಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳಾಗಿ ಹೆಚ್ಚು ಪುಸ್ತಕಗಳು ಮತ್ತು ಸಾಹಿತ್ಯಗಳ ಪ್ರಕಟಣೆಗಳು ಹೆಚ್ಚಾಗಲಿವೆ ಎಂದು ಅವರು ಸರ್ಕಾರಕ್ಕೆ ವಿನಂತಿಸಿದರು.