

ಬೆಳಗಾವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಮದುರ್ಗ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಮಲಪ್ರಭಾ ನದಿಗೆ ಮತ್ತು ಕಾಲುವೆಗೆ ನೀರು ಬಿಡಬೇಕು. ರಾಮದುರ್ಗ ತಾಲೂಕನ್ನು ಸಂಪೂರ್ಣ ಬರಗಾಲ ಪ್ರದೇಶ ಎಂದು ಘೋಷಿಸಬೇಕು. 8 ವರ್ಷವಾದರೂ ವೀರಭದ್ರ ಏತ ನೀರಾವರಿ ಕಾಮಗಾರಿ ಮುಗಿದಿಲ್ಲ, ಶೀಘ್ರದಲ್ಲಿ ಪೂರ್ಣಗೊಳಿಸಿ ಯೋಜನೆಯ ಬಾಧಿತರಿಗೆ ಪರಿಹಾರ ನೀಡಬೇಕು. ಸಾಲಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭವಾಗಿದ್ದು, ಭೂಮಿ ನೀಡಿದ ರೈತರಿಗೆ ಪರಿಹಾರ ಕೊಡಬೇಕು. ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತು ಪಶು ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ನೀಗಿಸಬೇಕು. 2015-16ನೇ ಸಾಲಿನಲ್ಲಿ ಕೇಂದ್ರದಿಂದ ಬರ ಪರಿಹಾರ 26.96 ಕೋಟಿ ರೂ. ಬಂದಿದ್ದು, ಇದರಲ್ಲಿ 4 ಕೋಟಿ ರೂ. ವರೆಗೆ ರೈತರಿಗೆ ಹಂಚದೇ ಅಧಿಕಾರಿಗಳು ಅಕ್ರಮ ಎಸೆಗಿದ್ದು ತನಿಖೆ ಮಾಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಶಿವಸಾಗರ ಸಕ್ಕರೆ ಕಾರ್ಖಾನೆಯ 2 ಹಂಗಾಮಿನ ಕಬ್ಬಿನ ಬಾಕಿ ಬಿಲ್ ಅನ್ನು ರೈತರಿಗೆ ಕೊಡಿಸಬೇಕು ಹಾಗೂ 85 ಸಾವಿರ ಶೇರುದಾರರ ಪೈಕಿ 37 ಸಾವಿರ ಶೇರುದಾರರಿಗೆ ಶೇರು ಪ್ರಮಾಣಪತ್ರ ಕೊಡದೇ ವಂಚಿಸಲಾಗಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಬಿ.ಎನ್. ದಳವಾಯಿ, ರವಿ ಸಿದ್ದಮ್ಮನವರ, ಶಿವಾನಂದ ಮುಗಳಿಹಾಳ, ಯಲ್ಲಪ್ಪ ದೊಡ್ಡಮನಿ, ಈರಣ್ಣ ರಾಜನಾಳ, ಮಹಾದೇವ ತ್ಯಾವಟಗಿ, ರಮೇಶ ಗುಡಿಯನ್ನವರ, ಈಶ್ವರ ಯಂಡಿಗೇರಿ, ದ್ಯಾಮಣ್ಣ ಪೊತ್ತೆನ್ನವರ ಇತರರಿದ್ದರು.