ಅಧಿಕಾರ ವಹಿಸಿಕೊಂಡ ರಾಜು ತಾಳಿಕೋಟಿ

16 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರಂಗಾಯಣ ನಿರ್ದೇಶಕರಾಗಿ ನೇಮಕಗೊಂಡ ಹವ್ಯಾಸಿ ರಂಗಭೂಮಿ ಕಲಾವಿದ, ಹಾಸ್ಯ ನಟ ರಾಜು ತಾಳಿಕೋಟಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಹೊಸ ಹೊಸ ನಾಟಕಗಳನ್ನು ತಂದು ರಂಗಾಯಣವನ್ನು ಸಮರ್ಥವಾಗಿ ಮುನ್ನಡೆಸುವ ಕನಸು ಇದೆ. ಆ ಕನಸು ನನಸಾಗಲು ಈ ಭಾಗದ ಕಲಾವಿದರು, ಸಾಹಿತಿಗಳು, ರಂಗಾಸಕ್ತರು, ರಂಗ ಸಮಾಜ ಹಾಗೂ ಮಾಧ್ಯಮದ ಸಹಕಾರ ಮುಖ್ಯ ಎಂದರು.
ನಿರ್ದೇಶಕ ಸ್ಥಾನಕ್ಕಿಂತ ಹೆಚ್ಚಿನ ಹುದ್ದೆಯ ಬೇಡಿಕೆ ಇಟ್ಟಿದ್ದೆ. ಆದರೆ ರಂಗಾಯಣ ನಿರ್ದೇಶಕ ಸ್ಥಾನ ನೀಡಿದ್ದು ಸಮಾಧಾನ ತಂದಿದೆ. ವೃತ್ತಿ ರಂಗಭೂಮಿಯಿಂದ ಬಂದಿರುವುದರಿಂದ ವಿರೋಧ ವ್ಯಕ್ತವಾಗಿದ್ದು, ವಿರೋಧ ಮಾಡಿದವರನ್ನು ಕರೆದುಕೊಂಡು ಮುಂದೆ ಸಾಗುತ್ತೇನೆ. ಅದಕ್ಕಾಗಿ ಆ. 17ರಂದು ರಂಗಾಯಣದಲ್ಲಿ ಕಲಾವಿದರು, ಸಾಹಿತಿಗಳ, ರಂಗಾಸಕ್ತರ ಸಭೆ ಕರೆದಿದ್ದೇನೆ. ಆದಾಗ್ಯೂ ವಿರೋಧ ಮಾಡಿದರೆ ನನ್ನ ಕೆಲಸದ ಮೂಲಕ ಉತ್ತರ ನೀಡುತ್ತೇನೆ ಎಂದರು.
ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಒಂದೇ ತಾಯಿ ಮಕ್ಕಳು. ಎರಡೂ ಕ್ಷೇತ್ರದವರನ್ನು ಒಗ್ಗೂಡಿಸಿಕೊಂಡು ರಂಗಾಯಣವನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡೋಣ. ಗ್ರಾಮೀಣ ಕಲಾವಿದರಿಗೆ ವೇದಿಕೆ ಒದಗಿಸುವ ಕೆಲಸ ಮಾಡುತ್ತೇನೆ. ರಂಗಾಯಣದ ಮೊದಲ ಕಾರ್ಯಕ್ರಮವಾಗಿ ಇಳಕಲ್​ನಲ್ಲಿ ರಂಗ ಶ್ರಾವಣ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಮೈಸೂರು ಬೆಂಗಳೂರಿಗೆ ಹತ್ತಿರವಿದೆ. ಧಾರವಾಡ ಬೆಂಗಳೂರಿನಿಂದ ದೂರ ಇರುವುದರಿಂದ ಮೈಸೂರು ರಂಗಾಯಣದಷ್ಟು ಅನುದಾನ ನೀಡುತ್ತಿಲ್ಲ ಎಂದು ಹಾಸ್ಯವಾಗಿ ಹೇಳಿದ ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಉತ್ತರ ಕರ್ನಾಟಕ ಭಾಗದವರು. ಮುಖ್ಯಮಂತ್ರಿ ಜತೆಗೆ ಒಡನಾಟವಿದ್ದು, ರಂಗಾಯಣದ ಅಭಿವೃದ್ಧಿಗೆ ಬೇಕಾದ ಕೆಲಸ ಮಾಡುತ್ತೇನೆ ಎಂದರು.
ರಂಗಾಯಣ ಆಡಾಳಿತಾಧಿಕಾರಿ ಶಶಿಕಲಾ ಹುಡೇದ, ರಂಗ ಸಮಾಜದ ಸದಸ್ಯ ವಿಜಯ ಮಹಾಂತೇಶ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net