

ಮೈಸೂರು: ಫಸ್ಟ್ ರ‌್ಯಾಂಕ್ ರಾಜು ಖ್ಯಾತಿಯ ನಟ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಸಿನಿಮಾ ಫೆ.14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ತಿಳಿಸಿದರು.
ಸತ್ಯ ಪಿಕ್ಚರ್ಸ್ ಮೂಲಕ ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಲನಚಿತ್ರ ಬಿಡುಗಡೆಯಾಗಲಿದೆ. ಹುಬ್ಬಳ್ಳಿಯ ಮೃದುಲಾ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರು ಸಿನಿಮಾ ನಿರ್ಮಾಣ ಮಾಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟ ಗುರುನಂದನ್ ಮಾತನಾಡಿ, ಈ ಹಿಂದೆ ನಾನು ಮಾಡಿದ ಚಿತ್ರಗಳಿಗಿಂತಲ್ಲೂ ಈ ಚಿತ್ರದಲ್ಲಿ ಪಾತ್ರ ವಿಭಿನ್ನವಾಗಿದೆ. ಸಂಡೂರು ಹಾಗೂ ವಿದೇಶದಲ್ಲಿಯೂ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಚಿತ್ರದ ಟ್ರೈಲರ್, ಗೀತೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ರವಿಶಂಕರ್, ಸಾಧು ಕೋಕಿಲ, ಅಚ್ಯುತ್‌ಕುಮಾರ್, ಚಿಕ್ಕಣ್ಣ, ಜೈಜಗದೀಶ್, ತಬಲಾ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಪ್ರಮುಖ ಪಾತ್ರದಲ್ಲಿದ್ದಾರೆ ನಟಿಸಿದ್ದಾರೆ ಎಂದು ತಿಳಿಸಿದರು.
ನಾಯಕಿ ಮೃದುಲಾ ಮಾತನಾಡಿ, ನಾನು ಮೂಲತಃ ಹುಬ್ಬಳ್ಳಿಯ ಹುಡುಗಿ. ಇದು ನನ್ನ ಮೊದಲ ಸಿನಿಮಾ. ನನ್ನದು ಟೀಚರ್ ಪಾತ್ರ. ಚಿತ್ರದಲ್ಲಿ ನಾಯಕನಿಗೆ ಬದುಕಿನ ಪಾಠ ಹೇಳಿಕೊಟ್ಟಿದ್ದೇನೆ ಎಂದರು.
ನಿರ್ಮಾಪಕ ಕಿರಣ್ ಬರ್ತೂರು ಮಾತನಾಡಿ, ಹಳ್ಳಿಯ ಹುಡುಗ ರಾಜು, ಓದಿ ವಿದ್ಯಾವಂತನಾಗಿ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದು ಹೊರಡುತ್ತಾನೆ. ಹಾಗಂತ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುವುದು ಆತ ಅಂದುಕೊಂಡಷ್ಟು ಸುಲಭವಾಗಿರಲ್ಲ. ಆತನ ಮುಂದೆ ಹಲವಾರು ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತವೆ. ಆತ ಅದನ್ನೆಲ್ಲ ಹೇಗೆ ನಿಭಾಯಿಸಿ, ಹಳ್ಳಿ ಜನರ ಪಾಲಿಗೆ ಹೇಗೆ ಜೇಮ್ಸ್ ಬಾಂಡ್ ಆಗುತ್ತಾನೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ ಎಂದರು.