

ಮಡಿಕೇರಿ: ರಾಜಾಸೀಟು ಉದ್ಯಾನ ಅಭಿವೃದ್ಧಿ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಕೈಗೊಳ್ಳಬೇಕಿದ್ದರೂ ಸುರಕ್ಷತೆ ಗಮನದಲ್ಲಿಟ್ಟುಕೊಳ್ಳುವುದರ ಜತೆಗೆ ತಾಂತ್ರಿಕ ಪರಿಣತರಿಂದ ವರದಿ ಪಡೆದು ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಲಹೆ ಮಾಡಿದರು.
ನಗರದ ರಾಜಾಸೀಟು ಉದ್ಯಾನವನದಲ್ಲಿ ಗುರುವಾರ ಆಯೋಜಿಸಿದ್ದ ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜಾಸೀಟು ಅಭಿವೃದ್ಧಿ ಸಂಬಂಧಿಸಿದಂತೆ ಲೋ ರೋಪ್‌ವೇ, ಕಿಡ್ಸ್, ನೆಟ್ ಕ್ಲೈಂಬಿಂಗ್ ಸೇರಿದಂತೆ ಮಕ್ಕಳು ಆಟವಾಡುವ ಸಾಹಸ ಚಟುವಟಿಕೆಗಳಿಗೆ ಅನುಮೋದನೆ ನೀಡಿದರು. ಉದ್ಯಾನದ ನಿರ್ಗಮನದ ಬಾಗಿಲು, ಟಿಕೇಟ್ ಕೌಂಟರ್ ಮುಂಭಾಗದಲ್ಲಿ ಸ್ಟೀಲ್ ರೈಲಿಂಗ್ ಅಳವಡಿಸುವುದು, ಕೂರ್ಗ್ ವಿಲೇಜ್‌ನಲ್ಲಿ ಪ್ರವೇಶ ಬಾಗಿಲು ಮತ್ತು ಪುಟಾಣಿ ರೈಲು ಜಾಗದಲ್ಲಿ ಚೈನ್ ಲಿಂಕ್ ಪೆನ್ಸಿಂಗ್ ಅಳವಡಿಸುವುದು, ಪಾಲಿಹೌಸ್ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಜಿಲ್ಲಾಧಿಕಾರಿ ಅನುಮೋದಿಸಿದರು.
ರಾಜಾಸೀಟು ಅಭಿವೃದ್ಧಿ ಸಂಬಂಧಿಸಿದಂತೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದರೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು, ತಾಂತ್ರಿಕ ಪರಿಣತರಿಂದ ವರದಿ ಪಡೆದು ಕಾಮಗಾರಿ ಕೈಗೊಳ್ಳಬೇಕು. ರಾಜಾಸೀಟಿನ ಪುಟಾಣಿ ರೈಲು ಅಭಿವೃದ್ಧಿ ಸಂಬಂಧಿಸಿದಂತೆ ಪಿಪಿಪಿ(ಪಬ್ಲಿಕ್ ಪ್ರವೇಟ್ ಪಾರ್ಟಿಸಿಪೇಶನ್) ಮಾದರಿಯಲ್ಲಿ ನಿರ್ವಹಣೆ ಮಾಡಿದರೆ ಒಳ್ಳೆಯದು. ಇದರಿಂದ ಹೊರಗುತ್ತಿಗೆ ಅವರೇ ನಿರ್ವಹಣೆ ಮಾಡುತ್ತಾರೆ. ಈ ಬಗ್ಗೆ ಗಮನಹರಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ರಾಜಾಸೀಟಿನಲ್ಲಿ ಪ್ಲಾಸ್ಟಿಕ್ ಬಾಟಲ್‌ನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದನ್ನು ತಡೆಯುವಲ್ಲಿ ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಇಡುವುದು, ಹಾಗೆಯೇ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ ಅಳವಡಿಸುವುದು. ಹಾಗೆಯೇ ಪರಿಸರ ಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ರಾಜಾಸೀಟು ಬಳಿ ಇರುವ ಕೂರ್ಗ್ ವಿಲೇಜ್‌ನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರು ಭೇಟಿ ನೀಡುವಂತಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜಾಸೀಟಿನಲ್ಲಿ ಧ್ವನಿವರ್ಧಕ ಅಳವಡಿಸಿ, ಸಣ್ಣ ಸಂಗೀತ ಮಾದರಿಯ ಧ್ವನಿ ಇರಬೇಕು. ಹಾಗೆಯೇ ಬೆಳಕು ವ್ಯವಸ್ಥೆ ಮಾಡಬೇಕು. ರಾಜಾಸೀಟು ಮುಂಭಾಗದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡಲು ಟೆಂಡರ್ ಆಹ್ವಾನಿಸುವಂತಾಗಬೇಕು. ಇದರಿಂದ ರಾಜಾಸೀಟು ಅಭಿವೃದ್ಧಿಗೆ ಮತ್ತಷ್ಟು ಹಣ ಸಂಗ್ರಹವಾಗಲಿದೆ. ಆ ನಿಟ್ಟಿನಲ್ಲಿ ಲೋಕೋಪಯೋಗಿ ಮತ್ತು ನಿರ್ಮಿತಿ ಕೇಂದ್ರದವರು ಅಂದಾಜು ಪಟ್ಟಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
’ನೆಹರು ಮಂಟಪದಲ್ಲಿ ಬೆಳಗ್ಗೆ ೮ ರಿಂದ ರಾತ್ರಿ ೭ ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಬೇಕು. ಇನ್ನಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು. ನೆಹರು ಮಂಟಪಕ್ಕೆ ಒಬ್ಬ ರಕ್ಷಕರನ್ನು ನಿಯೋಜಿಸಬೇಕು. ರಾಜರ ಗದ್ದುಗೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವಲ್ಲಿ ಮುಂದಾಗಬೇಕು. ಸಿಸಿ ಟಿವಿ ಅಳವಡಿಸಬೇಕು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಜರ ಗದ್ದುಗೆಗೆ ಭೇಟಿ ನೀಡುವಂತಾಗಲು ಇನ್ನಷ್ಟು ಆಕರ್ಷಣೀಯ ಮಾಡುವಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಾಜಾಸೀಟು, ನೆಹರು ಮಂಟಪ, ಗದ್ದುಗೆಯಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಜತೆಗೆ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದ ಅವರು, ಡಿಸೆಂಬರ್ ಎರಡನೇ ಶನಿವಾರ ಕಾಫಿ ಮೇಳ ಮತ್ತು ನಾಲ್ಕನೇ ಶನಿವಾರ ಜೇನು(ಹನಿ) ಮೇಳ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಮೋದ್, ಕಳೆದ ಅಕ್ಟೋಬರ್ ತಿಂಗಳಲ್ಲಿ ೨೪,೬೨,೯೪೦ ಲಕ್ಷ ರೂ. ಸಂಗ್ರಹವಾಗಿದೆ. ಹಾಗೆಯೇ ಒಂದು ತಿಂಗಳ ನಿರ್ವಹಣೆಗಾಗಿ ೬.೫೦ ಲಕ್ಷ ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್, ಕಾಫಿ ಮಂಡಳಿ ಉಪ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಪಿ.ಚಂದನ್ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಾದ ಚೆನ್ನಕೇಶವ, ದೇವರಾಜು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರೇಖಾ, ಪ್ರವಾಸೋದ್ಯಮ ಇಲಾಖೆಯ ಜತೀನ್ ಇತರರಿದ್ದರು.