

ಮೈಸೂರು: ಕನ್ನಡಕ್ಕಾಗಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಹೆಚ್ಚು ಹೋರಾಟ ಮಾಡಿ, ಗೋಕಾಕ್ ಚಳುವಳಿಯಂತಹ ಎಲ್ಲ ಚಳುವಳಿಯಲ್ಲಿ ಭಾಗವಹಿಸಿ ಕನ್ನಡಕ್ಕಾಗಿ ಹೆಚ್ಚು ಶ್ರಮಪಟ್ಟವರು ಡಾ.ರಾಜಕುಮಾರ್ ಎಂದು ತಹಶೀಲ್ದಾರ್ ಮಹೇಶ್ ಹೇಳಿದರು.
ಜಿಲ್ಲಾಡಳಿತ, ನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಡಾ. ರಾಜಕುಮಾರ್ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ಡಾ. ರಾಜಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಕಂಠೀರವ ಡಾ. ರಾಜಕುಮಾರ್ ಜಯಂತಿಯಲ್ಲಿ ಭಾಗಿಯಾಗಿರುವುದು ನನಗೆ ಬಹಳ ಸಂತೋಷ ಉಂಟುಮಾಡಿದೆ ಎಂದು ಹೇಳಿದರು.
ಡಾ. ರಾಜಕುಮಾರ್ ಜೀವನ ಸರಳತೆಯಿಂದ ಕೂಡಿತ್ತು. ಅವರು ತೆರೆಯ ಮೇಲೆ ತಾವು ನಟಿಸಿದ ಪಾತ್ರಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಂಡು ಜೀವಿಸುತ್ತಿದ್ದರು. ಇಂದಿಗೂ ಸಹ ಜನರ ಮನದಲ್ಲಿ ಅಚ್ಚಳಿಯದೆ ಉಳಿದ್ದಿದ್ದಾರೆ. ರಾಜ್ಯದಲ್ಲಿ ಅತಿಹೆಚ್ಚು ಬಿರುದ್ದನ್ನು ಪಡೆದಿರುವವರು ಏಕೈಕ ನಟ ಡಾ. ರಾಜಕುಮಾರ್ ಎಂದರು.
ತಮ್ಮ ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ ವರನಟ, ನಟಸಾರ್ವಭೌಮ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಮೊದಲಾದ ಬಿರುದು ಹಾಗೂ ಪ್ರಶಸ್ತಿಗಳು ಲಭಿಸಿದ್ದು, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವ ವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ವಲಯ ಆಯುಕ್ತೆ ಪ್ರತಿಭಾ, ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆಯ ಸಹಾಯಕ ವಾರ್ತಾಧಿಕಾರಿ ಕೆ. ಎನ್. ರಮೇಶ್, ಡಾ.ರಾಜ್ ಕುಮಾರ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಡಾ.ರಾಜ್ ಕುಮಾರ್ ಸಂಬಂಧಿ ಎಸ್.ಎ.ಶ್ರೀನಿವಾಸ್ ಹಾಗೂ ಇತರರು ಇದ್ದರು.