ರಾಜಕುಮಾರ್ ರಸ್ತೆ;ಎಲ್ಲೆಡೆ ದುರಾವಸ್ಥೆ. ಕಣ್ಮುಚ್ಚಿ ಕುಳಿತ ಬಿಡಬ್ಲ್ಯೂಎಸ್‌ಎಸ್‌ಬಿ ?

rkr
Published on

ಪ್ರಶಾಂತ ರಿಪ್ಪನ್​ಪೇಟೆ, ಬೆಂಗಳೂರು : ಬೆಂಗಳೂರಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಸಹಜವಾಗಿಯೇ ಸಂಚಾರ ಸಿಕ್ಕು, ಅಪಘಾತ, ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಆಯತಪ್ಪಿ ಬೀಳುವುದು ಸಾಮಾನ್ಯ. ಇದು ಸಾಲದೆಂಬಂತೆ ರಾಜಕುಮಾರ್ ರಸ್ತೆಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಕಳೆದ 3 ತಿಂಗಳಿಂದ ಕೈಗೆತ್ತಿಕೊಂಡಿರುವ ಪೈಪ್ ಅಳವಡಿಕೆ ಕಾಮಗಾರಿ ಇನ್ನೂ ಮುಗಿಯದ ಕಾರಣ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗುವಂತಾಗಿದೆ. ರಾಜಾಜಿನಗರದ ರಾಜಕುಮಾರ ರಸ್ತೆ ಬಹುತೇಕ ದಿನದ 24 ಗಂಟೆಯು ಸಂಚಾರದಿಂದ ಬ್ಯುಸಿಯಾಗಿರುವ ಪ್ರಮುಖ ರಸ್ತೆ. ಅದರಲ್ಲೂ ಮುಖ್ಯವಾಗಿ ಕೆಎಸ್‌ಆರ್‌ಟಿಸಿಯ ಬಹುತೇಕ ಬಸ್ಸುಗಳು ನಗರದಿಂದ ಹೊರ ಊರುಗಳಿಗೆ ಹೋಗುವುದು ಹಾಗೂ ಬರುವುದು ಇದೇ ರಸ್ತೆಯಲ್ಲಿ ಆದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಇಂತಹ ರಸ್ತೆಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ನಿರ್ಲಕ್ಷ್ಯ ವಹಿಸಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಮೂರು ತಿಂಗಳ ಹಿಂದೆ ರಸ್ತೆಬದಿಯಲ್ಲಿ ಸ್ಯಾನಿಟರಿ ಪೈಪ್ ಅಳವಡಿಸಲು ಗುಂಡಿ ತೆಗೆದಿದ್ದಾರೆ. ಆದರೆ ಅಂದಿನಿಂದ ಒಬ್ಬ ಅಧಿಕಾರಿಯೂ ಇಲ್ಲಿಗೆ ಬಂದಿಲ್ಲ. ಯಾವಾಗ ಕೆಲಸ ಮುಗಿಯುತ್ತದೆ ಎಂದು ಕೆಲಸಗಾರರನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುವ ಸಿದ್ಧ ಉತ್ತರ ನೀಡುತ್ತಾರೆ. ಒಂದು ಕಡೆಯಲ್ಲಿ ನಾಲ್ಕೈದು ಅಡಿ ಆಳದ ಗುಂಡಿ, ಮಧ್ಯದಲ್ಲಿ ಬೃಹತ್ ಸಿಮೆಂಟ್ ಪೈಪ್‌ಗಳು ಮತ್ತು ಚಿಕ್ಕ ಪೈಪ್‌ಗಳನ್ನು ಲೋಡ್‌ಗಟ್ಟಲೆ ಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಾಯ್ದೆರೆದಿರುವ ಗುಂಡಿ ಪಕ್ಕದಲ್ಲಿ ಕನಿಷ್ಟ ಬ್ಯಾರಿಕೇಡ್‌ಗಳನ್ನು ಸಹ ಅಳವಡಿಸಿಲ್ಲ. ಗುಂಡಿತೆಗೆದ ಮಣ್ಣನ್ನು ರಸ್ತೆಯ ಮೇಲೆ ಹಾಕಿರುವುದರಿಂದ ದೊಡ್ಡ ದಿಬ್ಬದಂತೆ ಮಾರ್ಪಾಡಾಗಿದ್ದು ವಾಹನಗಳು ಅನಿವಾರ್ಯವಾಗಿ ಒಂದರ ಹಿಂದೆ ಒಂದು ಹೋಗಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ. ಇದರಿಂದ ನವರಂಗ್ ಸಿಗ್ನಲ್‌ನಿಂದ ರಾಜಾಜಿನಗರದ ಪ್ರವೇಶದ್ವಾರದ ಜಗದ್ಗುರು ರೇಣುಕಾಚಾರ್ಯ ವೃತ್ತದವರೆಗೆ ಸಂಚಾರ ದಟ್ಟಣೆ ಮಿತಿಮೀರಿದೆ. ಕೆಲವು ಕಡೆಗಳಲ್ಲಂತು ದೊಡ್ಡ ಬಸ್ಸುಗಳು ಹೋಗುವಾಗ ಮಣ್ಣಿನ ದಿಬ್ಬದ ಮೇಲೆ ಒಂದು ಬದಿಯ ಚಕ್ರಗಳು ಸಂಚರಿಸಬೇಕಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇದರ ನಡುವೆ ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಚರಂಡಿಯಲ್ಲಿಯೂ ನೀರು ಸರಾಗವಾಗಿ ಹೋಗದೆ, ಗುಂಡಿಗಳಲ್ಲಿ ನೀರು ತುಂಬಿ ರಾತ್ರಿ ಹೊತ್ತು ಸಂಚರಿಸುವವರಿಗೆ ರಸ್ತೆ ಮತ್ತು ಗುಂಡಿಯ ವ್ಯತ್ಯಾಸ ತಿಳಿಯದೆ ಹಲವು ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಬಿಡಬ್ಲೂೃಎಸ್‌ಎಸ್‌ಬಿ ಅಥವಾ ಬಿಬಿಎಂಪಿ ಅಥವಾ ಗುತ್ತಿಗೆದಾರರು

ರಸ್ತೆಬದಿ ವ್ಯಾಪಾರಿಗಳಿಗೆ ಸಂಕಷ್ಟ

ಗುಂಡಿ ಅಗೆದಿರುವ ಬಿಡಬ್ಲ್ಯೂಎಸ್‌ಎಸ್‌ಬಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದ ಪರಿಣಾಮ ರಸ್ತೆ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳಿಗೆ ಸಂಕಷ್ಟ ಉಂಟಾಗಿದೆ. ಕಳೆದ ಮೂರು ತಿಂಗಳಿನಿಂದ ಅಂಗಡಿಗೆ ಗಿರಾಕಿಗಳು ಬರದೇ ವ್ಯಾಪಾರದಲ್ಲಿ ಭಾರಿ ನಷ್ಟವಾಗಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ವಿಜಯವಾಣಿಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಮೊದಲೇ ಕಿರಿದಾದ ರಸ್ತೆ, ಅದರ ನಡುವೆ ಮಣ್ಣು ಮತ್ತು ಪೈಪ್‌ಗಳನ್ನು ಸುರಿದಿದ್ದು, ಗಿರಾಕಿಗಳು ಕಾಲ್ನಡಿಗೆಯಲ್ಲೂ ಬರುವುದಕ್ಕೆ ಸಾಧ್ಯವಿಲ್ಲ. ವಾಹನಗಳನ್ನು ನಿಲ್ಲಿಸುವುದಂತು ಕನಸಿನ ಮಾತು. ಹೀಗಿರುವಾಗ ಗಿರಾಕಿಗಳು ಹೇಗೆ ಬರಲು ಸಾಧ್ಯ ಎಂಬುದು ವ್ಯಾಪಾರಿಗಳ ಪ್ರಶ್ನೆ.

ಗುಂಡಿಗೆ ಬಿದ್ದ ಸವಾರನ ಸ್ಥಿತಿ ಗಂಭೀರ

ರಸ್ತೆಗುಂಡಿ ಒಂದು ಕಡೆ, ಪೈಪ್ ಅಳವಡಿಕೆಗಾಗಿ ತೆಗೆದಿರುವ ಆಳವಾದ ಗುಂಡಿ ಇನ್ನೊಂದು ಕಡೆ. ಈ ಗೊಂದಲದಿಂದ ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರ ಅಪಘಾತಗಳು ನಡೆಯುತ್ತಿವೆ. ಇತ್ತೀಚೆಗೆ ರಾಜಕುಮಾರ್ ರಸ್ತೆಯಲ್ಲಿ ರಾತ್ರಿ ಸಂಚರಿಸುತ್ತಿದ್ದ ಮಂಜುನಾಥ ಎಂಬ ಯುವಕ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ನಾಲ್ಕೈದು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣವಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮಂಜುನಾಥ ತಂದೆ ಬಿ.ಜಿ.ಗಣೇಶ್ ರಾಜಾಜಿನಗರ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಎ್ಐಆರ್ ಕೂಡಾ ದಾಖಲಾಗಿದ್ದು, ಸಂಬಂಧಪಟ್ಟ ಇಂಜಿನಿಯರ್ ಸಸ್ಪೆಂಡ್ ಮಾಡಬೇಕು ಮತ್ತು ಗುತ್ತಿಗೆದಾರನ ಲೈಸೆನ್ಸ್ ರದ್ದುಗೊಳಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

"ಕಳೆದ ಮೂರು ತಿಂಗಳಿನಿಂದ ತೆಗೆದ ಗುಂಡಿಯನ್ನು ಮುಚ್ಚಿಲ್ಲ. ರಸ್ತೆಬದಿಯಲ್ಲಿ ಲೋಡ್‌ಗಟ್ಟಲೆ ಪೈಪ್‌ಗಳನ್ನು ಹಾಕಿದ್ದಾರೆ. ಇದರಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತು ಸಂಚಾರ ಸಿಕ್ಕು ಹೆಚ್ಚಾಗುತ್ತಿದೆ. ಮಳೆ ಬಂದಾಗ ಸಮಸ್ಯೆ ಹೇಳತೀರದು." -ವಾಸು, ರಾಜಕುಮಾರ್ ರಸ್ತೆ ನಿವಾಸಿ
ಮೂರು ತಿಂಗಳಿನಿಂದ ಅಂಗಡಿ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಕಾಮಗಾರಿಯಿಂದ ವ್ಯಾಪಾರವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಸಾಲ ಮಾಡಿ ಬಾಡಿಗೆ ಕಟ್ಟುತ್ತಿದ್ದೇವೆ. ಸಣ್ಣಪುಟ್ಟ ವ್ಯಾಪಾರಿಗಳ ಕಷ್ಟ ಕೇಳುವವರೇ ಇಲ್ಲ. ಅಧಿಕಾರಿಗಳು ಯಾರೂ ಇಲ್ಲಿಗೆ ಬರುತ್ತಿಲ್ಲ. - ವಿನೋದ್, ರಸ್ತೆಬದಿ ವ್ಯಾಪಾರಿ
"ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸೇಫ್ಟಿ ಮೆಜರ್ ಅನುಸರಿಸುತ್ತಿಲ್ಲ. ಒಂದೇ ಒಂದು ಬ್ಯಾರಿಕೇಡ್ ಕೂಡಾ ಅಳವಡಿಸಿಲ್ಲ. ಹೆಚ್ಚಿನ ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಕಾಮಗಾರಿ ನಡೆಸಬೇಕಾದರೆ ಹಂತ ಹಂತವಾಗಿ ಮಾಡಬೇಕಿತ್ತು. ಕಿಲೋಮೀಟರ್‌ಗಟ್ಟಲೆ ಗುಂಡಿ ತೆಗೆದು ಮುಚ್ಚದಿರುವುದರಿಂದ ಪ್ರತಿದಿನ ಅಪಘಾತಗಳಾಗುತ್ತಿವೆ. ನಮ್ಮ ಮಗ ಬಿದ್ದು ಚಿಂತಾಜನಕ ಸ್ಥಿತಿಯಲಿದ್ದು, ದೂರು ನೀಡಿದ್ದೇನೆ. ನಿರ್ಲಕ್ಷ್ಯ ಮಾಡಿರುವವರ ವಿರುದ್ದ ಕ್ರಮಕೈಗೊಳ್ಳಬೇಕು."  -ಬಿ.ಜಿ.ಗಣೇಶ್, ಅಪಘಾತಕ್ಕೀಡಾದ ಯುವಕನ ತಂದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net