ವರ ನಟನಿಗೆ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ

raj
ಡಾ.ಅಂಬೇಡ್ಕರ್ ಮತ್ತು ಡಾ.ರಾಜಕುಮಾರ್ ಜಯಂತ್ಯುತ್ಸವ
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
21ನೇ ಶತಮಾನದ ಕನ್ನಡ ಸಾಂಸ್ಕೃತಿಕ ರಾಯಭಾರಿ ವರನಟ ಡಾ.ರಾಜ್‌ಕುಮಾರ್ ಸಮಸ್ತ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನಗಳಿಸಿದವರು ಎಂದು ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ ಬಣ್ಣಿಸಿದರು.
ಪಟ್ಟಣದ ದಿವ್ಯಜ್ಯೋತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆವರಣದಲ್ಲಿ ಶ್ರೀ ಕೃಷ್ಣ ಪಾಡವ ತಿಗಳ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಮತ್ತು ಡಾ.ರಾಜಕುಮಾರ್ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಡಾ.ಅಂಬೇಡ್ಕರ್ ಶೋಷಿತ ಸಮುದಾಯದಲ್ಲಿ ಹುಟ್ಟಿ, ಅನೇಕ ಕಷ್ಟಗಳನ್ನು ಎದುರಿಸಿ ಮಹಾಜ್ಞಾನಿಯಾಗಿ ಬೆಳೆದು ಸಂವಿಧಾನ ರಚಿಸಿಕೊಟ್ಟರು. ಅದೇರೀತಿ ಚಲನಚಿತ್ರದಲ್ಲಿ ಅಭಿಯನದ ಮೂಲಕ ಡಾ.ರಾಜ್ ಕುಮಾರ್ ಅವರು, ನಾಡು-ನುಡಿ, ಸಂಸ್ಕೃತಿ, ಪರಂಪರೆಯನ್ನು ಜೀವಂತವಾಗಿರಿಸಿದ್ದಾರೆ. ಹಾಗಾಗಿ ಇವರಿಬ್ಬರೂ ನಾಡಿನ ಹೆಮ್ಮೆಯ ಮೇರು ಶಿಖರಗಳು ಎಂದರು.
ನಿವೃತ್ತ ಉಪನ್ಯಾಸಕ ಶರಣಯ್ಯ ಹಿರೇಮಠ್ ಮಾತನಾಡಿ, ದೇಶಕ್ಕಾಗಿ ಅಂಬೇಡ್ಕರ್ ಸಂವಿಧಾನ ರಚಿಸಿದರೆ ಇಂದಿನ ರಾಜಕಾರಣಿಗಳು ಬೇಳೆ ಬೇಯಿಸಿಕೊಳ್ಳಲು ಸಂವಿಧಾನದ ವಿಚಾರವನ್ನೇ ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ. ಯಾರಿಂದಲೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದೇರೀತಿ ಯಾವುದೋ ಒಂದು ಪಕ್ಷ ನಾವೇ ಸಂವಿಧಾನ ರಕ್ಷಿಸುತ್ತೇವೆ ಎನ್ನುವುದು ಸರಿಯಲ್ಲ. ರಾಜಕೀಯವಾಗಿ ತಾವುಗಳು ಅಧಿಕಾರಕ್ಕೇರಲು, ಮತ್ತೊಬ್ಬರು ಅಧಿಕಾರ ಉಳಿಸಿಕೊಳ್ಳಲು ಸಂವಿಧಾನದ ಹೆಸರು ಬಳಸಿಕೊಳ್ಳಬಾರದು ಎಂದರು.
ಸಾಹಿತಿ ಬಿ.ಕೆ.ಸಂಪತ್ ಕುಮಾರ್ ಮಾತನಾಡಿ, ರಾಜಕುಮಾರ್ ಎಂದರೆ ಕನ್ನಡ, ಕನ್ನಡ ಎಂದರೆ ರಾಜಕುಮಾರ್. ಅವರ ಅಭಿನಯ, ಸರಳತೆ, ಜೀವನಶೈಲಿ ಎಲ್ಲವೂ ಆದರ್ಶ. ಅವರ ಪ್ರತೀ ಚಿತ್ರಗಳು ಮಾನವೀಯ ಮೌಲ್ಯಗಳ ಸಂದೇಶ ಸಾರುತ್ತಿದ್ದವು. ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರಿತರಾಗಿ ಸಾವಿರಾರು ಜನ ಮತ್ತೆ ಕೃಷಿಕರಾದ ಉದಾಹರಣೆ ಇದೆ. ಅನ್ನದ ಪ್ರತಿ ಅಗಳಿನ ಮಹತ್ವವನ್ನು ಸಾರಿದವರು ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಬಸವಣ್ಣನವರ ಆಶಯದಂತೆ ಸಮ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಎಲ್ಲ ವರ್ಗ, ಜಾತಿಗೂ ಒಳಿತಾಗಲಿ ಎಂದರು.
ಡಾ.ಎನ್.ಚಂದ್ರಶೇಖರ್, ರೈತ ಸಂಘದ ಜಿಲ್ಲಾಧ್ಯಕ್ಷ ಡಾ.ವಿನೋದ ಕುಮಾರ ಗೌಡ, ದಿವ್ಯಜ್ಯೋತಿ ಸೊಸೈಟಿ ಅಧ್ಯಕ್ಷ ಆರ್.ವೆಂಕಟರಾಜು, ಪದಾಧಿಕಾರಿ ಸುಬ್ರಮಣ್ಯ, ರಂಗಭೂಮಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ತಾಲೂಕು ಅಧ್ಯಕ್ಷ ಎಂ.ಮೋಹನ ಬಾಬು, ಕೃಷ್ಣಪ್ಪ, ಬೈಚಾಪುರ ನಾರಾಯಣಸ್ವಾಮಿ, ಪ್ರಭು, ಸಿ.ಪಿ.ನರಸಿಂಹರೆಡ್ಡಿ, ನಂಜುಂಡಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net