

ಹುಬ್ಬಳ್ಳಿ: ನನ್ನ ಕ್ಷೇತ್ರದಲ್ಲಿರುವ ರಾಜಕಾಲುವೆಗಳನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದೇನೆ. ಒತ್ತುವರಿ ತೆರವು, ತ್ಯಾಜ್ಯ ವಿಲೇವಾರಿ, ಹೂಳೆತ್ತುವದು ಸೇರಿ ಹಲವು ಕೆಲಸ ಮಾಡಲು ಸೂಚಿಸಿದ್ದೇನೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದಿಂದ ನ್ಯೂಕಾಟನ್ ಮಾರ್ಕೆಟ್ವರೆಗೆ ಹಾದು ಹೋಗಿರುವ ನಾಲಾ ವೀಕ್ಷಿಸಿದ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಳೆಗಾಲ ಬಂದಾಗಲೊಮ್ಮೆ ನಾಲಾಗುಂಟ ಇರುವ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದು ನನ್ನ ಗಮನಕ್ಕೆ ಬಂದಿದೆ. ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಅಲ್ಲದೆ ಮುಂದಿನ ದಿನಗಳಲ್ಲಿ ನಾಲಾ ಗುಂಟ ಪೂರಕವಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ನಾಲಾಗಳಲ್ಲಿ ಹಲವು ವ್ಯಾಪಾರಿಗಳು ತ್ಯಾಜ್ಯ ಸುರಿಯುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಪಾಲಿಕೆಯ ಪ್ರತಿ ವಲಯ ಕಚೇರಿಗಳಲ್ಲಿ ಮಳೆಗಾಲದಲ್ಲಿ ನೀರು ನಿರ್ವಹಣೆ ಸಂಬಂಧ 6 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯರಾದ ಮೀನಾಕ್ಷಿ ಒಂಟಮೂರಿ, ರೂಪಾ ಶೆಟ್ಟಿ, ಬಿಜೆಪಿ ವಕ್ತಾರ ರವಿ ನಾಯಕ, ರವಿ ಕೊಪ್ಪಳ, ವಲಯ ಸಹಾಯಕ ಆಯುಕ್ತ ಮಲ್ಲಿಕಾರ್ಜುನ ಬಿ.ಎಂ. ಇತರರು ಇದ್ದರು.
ಗ್ಯಾರಂಟಿಗಳತ್ತ ಗಮನಹರಿಸಿ: ಆರ್ಎಸ್ಎಸ್, ಬಜರಂಗದಳ ನಿಷೇಧ ಮಾಡುವುದಾಗಿ ಹೇಳಿ ಕಾಂಗ್ರೆಸ್ ಸರ್ಕಾರ ಜನರ ದಿಕ್ಕುತಪ್ಪಿಸಬಾರದು. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಗ್ಯಾರಂಟಿಗಳತ್ತ ಗಮನಹರಿಸಬೇಕು. ಜನರು ನಿಮ್ಮನ್ನು ಬಹುಮತದಿಂದ ಆರಿಸಿ ತಂದಿರುವುದು ಒಳ್ಳೆಯ ಆಡಳಿತ ಮಾಡುವುದಕ್ಕೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ ತಕ್ಷಣ ಮನಸ್ಸೋ ಇಚ್ಛೆ ಕೆಲಸ ಮಾಡಲು ಅಲ್ಲ. ಜನರು ಅಭಿವೃದ್ಧಿ ಕೆಲಸವನ್ನು ನಿರೀಕ್ಷಿಸುತ್ತಿದ್ದಾರೆ. ಇದರ ಕಡೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಮೇಯರ್ ಚುನಾವಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಿಗದಿಯಾದ ಬಳಿಕ ಈ ಕುರಿತು ನಾವೆಲ್ಲ ಚಿಂತನೆ ನಡೆಸಲಿದ್ದೇವೆ ಎಂದರು.
ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವುದು ಗಮನಕ್ಕೆ ಬಂದಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ಕುರಿತು ಸಭೆ ನಡೆಸಿದ್ದಾರೆ. ಒಟ್ಟಾರೆಯಾಗಿ ಅವಳಿ ನಗರದ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ
ಪರಿಹಾರದ ಯೋಜನೆ ರೂಪಿಸಲಾಗುವುದು. ಮುಂದಿನ 30 ವರ್ಷಗಳವರೆಗೆ ಆಗುವ ಜನಸಂಖ್ಯೆ, ಅಗತ್ಯ ನೀರು ಇವೆಲ್ಲವನ್ನೂ ತಾಳೆ ಮಾಡಿ, ಜನರಿಗೆ ನೀರು ಪೂರೈಸುವ ಚಿಂತನೆ ನಡೆಸಲಾಗುವುದು ಎಂದರು.