ರಾಜಕಾಲುವೆ ಒತ್ತುವರಿ ಪತ್ತೆ ಕಾರ್ಯ ಶುರು

18 BPT 3
Published on

ಬಂಗಾರಪೇಟೆ: ತಹಸೀಲ್ದಾರ್​ ಸೂಚನೆ ಮೇರೆಗೆ ಕಾರಹಳ್ಳಿ ಸರ್ವೇ ನಂಬರ್​ಗಳ ಮಧ್ಯೆ ಬಂಗಾರಪೇಟೆ ಕೆರೆಗೆ ಹಾದು ಹೋಗುವ ರಾಜಕಾಲುವೆ ಒತ್ತುವರಿ ಪತ್ತೆ ಹಚ್ಚಿ ತೆರವುಗೊಳಿಸಲು ಪೊಲೀಸ್​ ಬಂದೋಬಸ್ತ್​ ನಡುವೆ ಶುಕ್ರವಾರದಿಂದ ಸರ್ವೇಕಾರ್ಯ ಪ್ರಾರಂಭಿಸಲಾಯಿತು.

ಒತ್ತುವರಿ ಮಾಡಿರುವ ರಾಜಕಾಲುವೆಗಳು ಇಂದು ಸಣ್ಣ ಪ್ರಮಾಣದ ಕಾಲುವೆಗಳಾಗಿ ಮಾರ್ಪಟ್ಟಿವೆ. ಆದರೆ, ಇಲ್ಲಿ ಟಿಪ್ಪಣಿ ಪ್ರಕಾರ ರಾಜಕಾಲುವೆ ಅಗಲ ಎಷ್ಟು ಬರುತ್ತದೆ ಎಂದು ತಿಳಿಯಲು ಅಕ್ಕಪಕ್ಕದ ಸರ್ವೇನಂಬರ್​ಗಳ ಭೂಮಿ ಅಳತೆ ಮಾಡಿದ ನಂತರ ಮಧ್ಯದಲ್ಲಿ ಉಳಿಕೆ ಆಗಿರುವುದನ್ನು ಕಾಲುವೆ ಎಂದು ಗುರುತಿಸಲಾಗುತ್ತಿದೆ. ಸಾಮಾನ್ಯವಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಮಾನ್ಯವಾಗಿ ದೊಡ್ಡ ಕಾಲುವೆಗಳು ಇರುತ್ತದೆ. ಅದರಲ್ಲಿ 100, 80 ಅಡಿ ಅಗಲ ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಇರಬಹುದು. ಸರ್ವೇ ನಡೆಸಿದಾಗ ಮಾತ್ರ ರಾಜಕಾಲುವೆ ವಿಸ್ತೀರ್ಣ ತಿಳಿಯಲು ಸಾಧ್ಯವಾಗುತ್ತದೆ.

ಪಟ್ಟಣದ ಶ್ರೀನಿವಾಸಗೌಡ ಬಡಾವಣೆ ನಿವಾಸಿ ಪ್ರೇಮ್​ ಕುಮಾರ್​ ಸಾರ್ವಜನಿಕ ಕುಂದು ಕೊರತೆ ಪರಿಹಾರದಡಿ ಕಾರಹಳ್ಳಿ ವ್ಯಾಪ್ತಿಗೆ ಬರುವ ಸರ್ವೇ ನಂಬರ್​ಗಳ ಮುಖಾಂತರ ಬಂಗಾರಪೇಟೆ ಕೆರೆಗೆ ಹಾದು ಹೋಗುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿಮುಚ್ಚಲಾಗಿದೆ ಎಂದು ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಪುರಸಭೆ, ಕಾರಹಳ್ಳಿ ಗ್ರಾಪಂ, ಸರ್ವೇಮತ್ತು ಕಂದಾಯ ಇಲಾಖೆ ಒಳಗೊಂಡಂತೆ ತಹಸೀಲ್ದಾರ್​ ಸುಜಾತಾ ಅವರ ಸೂಚನೆ ಮೇರೆಗೆ ಸರ್ವೇಕಾರ್ಯ ನಡೆಸಲಾಗುತ್ತಿದೆ. ತಾಲೂಕಿನ ಭೂಮಾಪಕರು, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಜಂಟಿಯಾಗಿ ಬಂಗಾರಪೇಟೆ ಪಟ್ಟಣದ ಸರ್ವೆ ನಂ 7 ರ 3,5-17 ಗುಂಟೆ ಜಮೀನಿಂದ ಸ.ನಂ.ಗಳಾದ 197, 198/122, 188/1, 187/2?, 187/4, 197, 187/1, 188/3, 183/12, 183/6, 184/3, 186, 184/10 ಕೆರೆಗೆ ಹಾದುಹೋಗುವ ನೀರಿನ ರಾಜುಕಾಲುವೆ ಸರ್ವೇ ಮಾಡಿ ಛಾಯಾ ಚಿತ್ರದೊಂದಿಗೆ ವರದಿ ನೀಡಬೇಕೆಂದು ತಹಸೀಲ್ದಾರ್​ ಸೂಚಿಸಿದ್ದಾರೆ.

ರಿಯಲ್​ ಎಸ್ಟೇಟ್​ ಮಾಫಿಯಾ ಅಬ್ಬರದಿಂದಾಗಿ ಕಟ್ಟಡಗಳು ನಿಮಾರ್ಣವಾಗಿದ್ದು, ರಾಜಕಾಲುವೆ ಅತಿಕ್ರಮವಾಗಿರುವುದು ಮತ್ತು ಕಾಲುವೆ ಮುಚ್ಚಿ ರಸ್ತೆಗಳಾಗಿ ಮಾರ್ಪಡಿಸಲಾಗಿರುವುದು ಸರ್ವೇ ಕಾರ್ಯದಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗಿದೆ.

ಸರ್ವೇ ಇಲಾಖೆ ಅಧಿಕಾರಿ ತೌಸೀಫ್​, ಕಂದಾಯ ಇಲಾಖೆ ಅಧಿಕಾರಿ ಪವನ್​, ಕಾರಹಳ್ಳಿ ಗ್ರಾಪಂ ಪ್ರಸಾದ್​ ರೆಡ್ಡಿ ಹಾಜರಿದ್ದರು. ಸರ್ವೇ ಕಾರ್ಯ ಮುಗಿದ ನಂತರ ನಕ್ಷೆಯಲ್ಲಿ ತೋರಿಸಿರುವಂತೆ ಒತ್ತುವರಿ ಜಾಗ ಜೆಸಿಬಿ ಸಹಾಯದಿಂದ ತೆರವುಗೊಳಿಸಲು ತಾಲೂಕು ಆಡಳಿತ ಸಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net